ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೀಡಾಡಿ ಜಾನುವಾರುಗಳ ಹಾವಳಿ ಮುಂದುವರಿದ್ದು, ಹೋರಿಗಳ ಜಗಳದಲ್ಲಿ ಮಹಿಳೆ ಹಾಗೂ ಮಗು ಬಿದ್ದು ಗಾಯಗೊಂಡ ಘಟನೆ ರವಿವಾರ (ಮಾ.08) ಸಂಜೆ ಸುಬ್ರಹ್ಮಣ್ಯದಲ್ಲಿ ಸಂಭವಿಸಿದೆ.

ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಎರಡು ಹೋರಿಗಳ ನಡುವೆ ಜಗಳವಾಗಿದ್ದು, ಈ ವೇಳೆ ಅದನ್ನು ಬಿಡಿಸಲು ಯತ್ನಿಸಿದಾಗ ಹೋರಿಗಳು ರಥಬೀದಿಯಲ್ಲಿ ಸಾಗುತ್ತಿದ್ದ ಭಕ್ತರ ನಡುವೆ ಓಡಿದೆ. ಪರಿಣಾಮ ಮಹಿಳೆ ಹಾಗೂ ಮಗು ಎಡವಿ ಬಿದ್ದಿದ್ದಾರೆ. ಇಬ್ಬರಿಗೂ ಅಲ್ಪ ಗಾಯವಾಗಿದ್ದು, ಸ್ಥಳದಲ್ಲಿದ್ದವರು ಬಿದ್ದವರನ್ನು ಎದ್ದೇಳಿಸಿ ಉಪಚರಿಸಿದ್ದಾರೆ. ಘಟನೆಯ ವೀಡಿಯೋ ವೈರಲ್ ಆಗಿದೆ.
ನಿಯಂತ್ರಣ ಕ್ರಮಕ್ಕೆ ಆಗ್ರಹ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಲವು ಸಮಯಗಳಿಂದ ಬೀಡಾಡಿ ಜಾನುವಾರು, ಬೀದಿ ನಾಯಿಗಳ ಹಾವಳಿ ಹೆಚ್ಚಳಗೊಂಡಿದ್ದು, ಪರಿಣಾಮ ಸಾರ್ವಜನಿಕರು, ಭಕ್ತರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಕ್ರಮಕ್ಕೆ ಮನವಿ ಮಾಡಿದರೂ ಕ್ರಮ ವಹಿಸಲಾಗಿಲ್ಲ ಎಂದು ಆರೋಪಿಸಲಾಗಿದ್ದು, ಇನ್ನಾದರೂ ಇಂತಹದಕ್ಕೆ ಸೂಕ್ತ ನಿಯಂತ್ರಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.




