ಬುರುಡೆ ಪ್ರಕರಣ: ಎಸ್ಐಟಿ ವರದಿ ಆದೇಶ ಡಿ.29ಕ್ಕೆ ಮುಂದೂಡಿಕೆ

Share with

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಮುಂದಿನ ಕ್ರಮಕ್ಕಾಗಿ ಎಸ್‌ಐಟಿಯು ಬೆಳ್ತಂಗಡಿ ನ್ಯಾಯಾ ಲಯಕ್ಕೆ ಸಲ್ಲಿಕೆ ಮಾಡಿರುವ ವರದಿಯ ಮೇಲಿನ ವಿಚಾರಣೆ ಪೂರ್ಣ ಗೊಂಡಿದ್ದು ಡಿ. 26ಕ್ಕೆ ಕಾಯ್ದಿರಿಸಿದ್ದ ಆದೇಶದ ದಿನವನ್ನು ನ್ಯಾಯಾಲಯ ಡಿ. 29ಕ್ಕೆ ಮುಂದೂಡಿದೆ.

ಎಸ್‌ಐಟಿಯು ನ. 20ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಚಿನ್ನಯ್ಯ ಸಹಿತ 6 ಮಂದಿಯನ್ನು ಆರೋಪಿಗಳನ್ನಾಗಿ ಉಲ್ಲೇಖೀಸಿ ವರದಿ ನೀಡಿದ್ದು, ತನಿಖೆ ವಿವರವನ್ನು ದಾಖಲಿಸಿ ಮುಂದಿನ ತನಿಖೆಗೆ ಮಾರ್ಗದರ್ಶನ ನೀಡುವಂತೆ ಎಸ್‌ಐಟಿ ಪರ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಅವರು ವಾದ ಮಂಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು.

ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್‌ಐಟಿ ಅಧಿಕಾರಿಗಳು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಸೆಕ್ಷನ್ ನಡಿ ಸುಳ್ಳು ಸಾಕ್ಷಿಯ ಅಪರಾಧಕ್ಕಾಗಿ ಕಾನೂನು ಕ್ರಮಕ್ಕೆ ವಿನಂತಿಸಿ ಆರೋಪಿಗಳ ವಿರುದ್ಧ 3,923 ಪುಟಗಳ ವರದಿಯನ್ನು ಸಲ್ಲಿಸಿದ್ದರು. ಎಸ್‌ಐಟಿ ಪರ ವಕೀಲರು ಕೆಲವೊಂದು ಮಹತ್ವದ ಅಂಶಗಳನ್ನು ನ್ಯಾಯಾಲಯದ ಮುಂದಿಟ್ಟು ಮುಂದಿನ ಕಾನೂನು ಕ್ರಮಕ್ಕಾಗಿ ವಿನಂತಿಸಿದ್ದರು. ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ವಾದವನ್ನು ಆಲಿಸಿ ಮುಂದಿನ ಆದೇಶವನ್ನು ಡಿ. 26ಕ್ಕೆ ಕಾಯ್ದಿರಿಸಿದ್ದರು. ಆದರೆ ಇದೀಗ ಆದೇಶದ ದಿನವನ್ನು ಡಿ. 29ಕ್ಕೆ ಮುಂದೂಡಿದೆ.

ಬುರುಡೆ ಪ್ರಕರಣದ ಆರೋಪಿಯಾಗಿರುವ ಚಿನ್ನಯ್ಯ ಕೂಡ ಶುಕ್ರವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ

ಎದುರಿಸಿದ್ದು, ಬಳಿಕ ನ್ಯಾಯಾಲಯದ ಜಾಮೀ ನಿನ ಷರತ್ತಿನ ಭಾಗವಾಗಿ ಎಸ್‌ಐಟಿ ಕಚೇರಿಗೂ ಹಾಜರಾಗಿ ಸಹಿ ಹಾಕಿ ತೆರಳಿದ್ದಾನೆ. ಆತ ಪತ್ನಿ ಮಲ್ಲಿಕಾ ಜತೆ ಆಗಮಿಸಿದ್ದನು ಎನ್ನಲಾಗಿದೆ.

ಮೊಬೈಲ್ ಬಿಡುಗಡೆಗೆ ಅರ್ಜಿ:

ಎಸ್‌ಐಟಿಯು ಗಿರೀಶ್ ಮಟ್ಟಣ್ಣನವರ್ ಹಾಗೂ ಉಜಿರೆಯ ಗಣೇಶ್ ಶೆಟ್ಟಿ ಅವರ ಮೊಬೈಲ್ ಈ ಹಿಂದೆಯೇ ವಶಪಡಿಸಿಕೊಂಡಿದ್ದು, ಅದನ್ನು ಬಿಡುಗಡೆ ಮಾಡುವಂತೆ ಅವರು ತಮ್ಮ ಪರ ವಕೀಲರ ಮೂಲಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದರ ಕುರಿತು ಶುಕ್ರವಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಎಸ್‌ಐಟಿ ಪರ ದಿವ್ಯರಾಜ್ ಹೆಗ್ಡೆ ಅವರು ವಾದ ಮಂಡಿಸಿದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಇದರ ಆದೇಶವನ್ನು ಕೂಡ ಡಿ. 29ಕ್ಕೆ ಮುಂದೂಡಿದ್ದಾರೆ.

ಜಯಂತ್‌ಗೆ ವರದಿಯ ಮಾಹಿತಿ:

ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ನ್ಯಾಯಾಲಯಕ್ಕೆ ನೀಡಿರುವ ವರದಿಯ ಪ್ರತಿ ಕೊಡುವಂತೆ ಜಯಂತ್ ಟಿ. ವಕೀಲರ ಮೂಲಕ ಮನವಿ ಮಾಡಿದ್ದು, ನ್ಯಾಯಾಲಯವು 3,923 ಪುಟಗಳ ವರದಿಯಲ್ಲಿ ಅವರಿಗೆ 1,100 ಪುಟಗಳ ವರದಿಯನ್ನು ನೀಡಿದೆ ಎಂದು ತಿಳಿದುಬಂದಿದೆ.


Share with

Leave a Reply

Your email address will not be published. Required fields are marked *