ಉಪ್ಪಳ: ಬಸ್ ಸಂಚರಿಸುತ್ತಿರುವ ಮಧ್ಯೆ ಚಾಲಕ ಹೃದಯಾಘಾತದಿಂದ ಮೃತಪಟ್ಟ ಘಟಣೆ ನಡೆದಿದೆ. ಚೇವಾರು ಸಮೀಪದ ನಿವಾಸಿ [ದಿ] ಮೊದೀನ್ ಕುಂಞ ರವರ ಪುತ್ರ ಬಸ್ ಚಾಲಕ ಅಬ್ದುಲ್ ರಹಿಮಾನ್ [42] ಮೃತಪಟ್ಟಿದ್ದಾರೆ.
ಇವರು ಧರ್ಮತ್ತಡ್ಕ-ಬಂದ್ಯೋಡು-ಕಾಸರಗೋಡು ರೂಟ್‌ನಲ್ಲಿ ಸಂಚರಿಸುವ ಜಿಸ್ತಿಯಾ ಬಸ್‌ನ ಚಾಲಕರಾಗಿದ್ದಾರೆ. ಭಾನುವಾರ ಬೆಳಿಗ್ಗೆ ಧರ್ಮತಡ್ಕದಿಂದ ಕಾಸರಗೋಡಿಗೆ ಬಸ್ ಹೊರಟಿದೆ.
ಈ ವೇಳೆ ಪೆರ್ಮುದೆ ತಲುಪಿದಾಗ ಎದೆನೋವು ಉಂಟಾಗಿದ್ದು, ಅಲ್ಲಿ ಬಸ್ ನಿಲ್ಲಿಸಿ ಸೋಡಾ ಕುಡಿದಿದ್ದಾರೆ. ಬಳಿಕ ಪ್ರಯಾಣವನ್ನು ಮುಂದುವರಿಸಿ ಸುಮಾರು ಎರಡೂವರೆ ಕಿಲೋ ಮೀಟರ್ ಸಂಚರಿಸಿ ಸುಮಾರು 10 ಗಂಟೆ ವೇಳೆ ತಲುಪುತ್ತಿದ್ದಂತೆ ಮತ್ತೆ ಎದೆನೋವು ಉಂಟಾಗಿ ಅಸ್ವಸ್ಥಗೊಂಡಿದ್ದರು.
ಇದೇ ವೇಳೆ ಬಸ್‌ನ್ನು ಬದಿಗೆ ಸರಿಸಿಟ್ಟಿದ್ದು, ಅಷ್ಟರಲ್ಲಿ ಕುಸಿದುಬಿದ್ದರು. ಅವರನ್ನು ಕೂಡಲೇ ಸ್ಥಳೀಯರು ಸೇರಿ ಬಂದ್ಯೋಡಿನ ಖಾಸಾಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟರು. 16 ವರ್ಷಗಳಿಂದ ಬಸ್ ಚಾಲಕರಾಗಿ ದುಡಿಯುತ್ತಿದ್ದರು.
ರೆಡ್ ಬೊಯ್ಸ್ ಕ್ಲಬ್ ಕುಂಟಗೇರಡ್ಕ ಇದರ ಸದಸ್ಯರಾಗಿದ್ದಾರೆ. ಮೃತರು ತಾಯಿ ಮರಿಯಮ್ಮ, ಪತ್ನಿ ಜೌರ, ಪುತ್ರ ಅರ್‌ಫತ್, ಸಹೋದರ ಅಲಿ, ಸಹೋದರಿಯರಾದ ಬೀಫಾತಿಮ್ಮ, ನೆಬೀಸ, ಅತಿಕಾ, ಅವ್ವಮ್ಮ ಹಾಗೂ ಅಪಾರ ಬಂಧುಗಳು, ಸ್ನೇಹಿತರನ್ನು ಅಗಲಿದ್ದಾರೆ.
ಮೃತರ ಮನೆಗೆ ಬಸ್ ಮಾಲಕರು, ಸಿಬ್ಬಂದಿ ವರ್ಗ, ಪೈವಳಿಕೆ ಪಂಚಾಯತ್ ಸದಸ್ಯರುಗಳಾದ ಅಶೋಕ ಭಂಡಾರಿ, ರಾಜೀವಿ, ಸಿಪಿಎಂ ನೇತಾರ ಬಸೀರ್.ಬಿ.ಎ ಸಹಿತ ವಿವಿಧ ಪಕ್ಷಗಳ ನೇತಾರರು, ಕಾರ್ಯಕರ್ತರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.