ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿ; ಓರ್ವ ಮೃತ್ಯು,35 ವಿದ್ಯಾರ್ಥಿಗಳಿಗೆ ಗಾಯ

Share with

ಹೊನ್ನಾವರ: ತಾಲೂಕಿನ ಗೇರುಸೊಪ್ಪ ಸುಳೆಮುರ್ಕಿ ಕ್ರಾಸ್ ಸಮೀಪ ಮೈಸೂರು ಶಾಲಾ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಪಲ್ಟಿಯಾಗಿ, ಓರ್ವ ವಿದ್ಯಾರ್ಥಿ ಮೃತಪಟ್ಟು, 35 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕಿಯರು ಗಾಯಗೊಂಡ ಘಟನೆ ರವಿವಾರ (ನ.30) ಸಂಜೆ ನಡೆದಿದೆ.

ಪವನ್ (16) ಜನ್ಮದಿನದಂದೇ ಮೃತಪಟ್ಟ ವಿದ್ಯಾರ್ಥಿ.

ಮೈಸೂರಿನ ಟಿ.ಕೆ. ಲೆಔಟ್ ತರಳಬಾಳು ಪ್ರೌಡಶಾಲಾ ವಿದ್ಯಾರ್ಥಿಗಳು ಜೋಗ್ ಫಾಲ್ಸ್ ಪ್ರವಾಸ ಮುಗಿಸಿ ಉತ್ತರಕನ್ನಡ ಜಿಲ್ಲೆಯ ಗೋಕರ್ಣ, ಯಾಣ ಪ್ರವಾಸ ಕೈಗೊಳ್ಳುತ್ತಿದ್ದ ವೇಳೆ ಸುಳೆಮುರ್ಕಿ ಕ್ರಾಸ್ ಬಳಿ ಬಸ್ ಪಲ್ಟಿಯಾಗಿದೆ.

50 ಜನರಿರುವ ಪ್ರವಾಸಿ ಬಸ್ಸಿನಲ್ಲಿ 35 ಜನ ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು ಗಾಯಗೊಂಡಿದ್ದು, ಇದರಲ್ಲಿ 2 ವಿದ್ಯಾರ್ಥಿಗಳನ್ನು ಹಾಗೂ ಓರ್ವ ಶಿಕ್ಷಕಿಯನ್ನು ಹೊರ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಉಳಿದ ಗಾಯಾಳುಗಳಿಗೆ ಸ್ಥಳೀಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಯ ಸುಳೇಮುರ್ಕಿ ತಿರುವಿನಲ್ಲಿ ಪದೇ ಪದೇ ಅಪಘಾತ ಸಂಭವಿಸುತ್ತಿರುವುದರಿಂದ ಇಲ್ಲಿ ಅಪಘಾತ ತಡೆಯಲು ಸೂಕ್ತ ವ್ಯವಸ್ಥೆ ಆಗಬೇಕಾಗಿದೆ.

ಸ್ಥಳಕ್ಕೆ ಎಸಿ ಕಾವ್ಯರಾಣಿ, ತಹಶೀಲ್ದಾರ್ ಪ್ರವೀಣ ಕರಾಂಡೆ, ಇಓ ಪುಟ್ಟೆಗೌಡ, ಪ.ಪಂ.ಮುಖ್ಯಾಧಿಕಾರಿ ಯೇಸು ಬೆಂಗಳೂರು ಬಿಇಓ ವಿನಾಯಕ ಅವಧಾನಿ, ಸಚಿವರ ಪುತ್ರಿ ಬೀನಾ ವೈದ್ಯ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಸಿಪಿಐ ಸಿದ್ದರಾಮೇಶ್ವರ, ಪಿಎಸೈ ಮಂಜುನಾಥ ಸೇರಿದಂತೆ ಪೊಲೀಸ್‌ ಸಿಬ್ಬಂದಿಗಳು ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ ಸ್ಥಳಿಯರ ಸಹಕಾರದ ಮೇರೆಗೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು.

ಈ ಕುರಿತು ಬಸ್ ಚಾಲಕನ ವಿರುದ್ಧ ಹೊನ್ನಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *