ಮಂಗಳೂರು: ರಾಷ್ಟ್ರೀಯ ಮಟ್ಟದ ಸಿಎ ಪರೀಕ್ಷೆ ಹಾಗೂ ಮಂಗಳೂರು ವಿವಿಯ ಬಿಕಾಂ ಪರೀಕ್ಷೆ ಒಂದೇ ದಿನ ನಿಗದಿಯಾಗಿರುವ ಕಾರಣ ಕರಾವಳಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ.

ಜ.19ರಂದು ಮಧ್ಯಾಹ್ನ 2ರಿಂದ 4ರ ವರೆಗೆ ವಿ.ವಿ.ಯ ಅಂತಿಮ ವರ್ಷದ ಬಿಕಾಂನ “ಫೈನಾನ್ಶಿಯಲ್ ಇನ್ ಸ್ಟಿಟ್ಯೂಷನ್ ಮಾರ್ಕೆಟ್’ ಎಂಬ ವಿಷಯದಲ್ಲಿ ಪರೀಕ್ಷೆ ನಿಗದಿಯಾಗಿದೆ. ಇದೇ ದಿನಾಂಕದ ಇದೇ ಸಮಯ (ಮಧ್ಯಾಹ್ನ 2ರಿಂದ) ಸಿಎ ಅವರಿಗೆ ಸಂಬಂಧಿಸಿದ “ಆಡಿಟಿಂಗ್ ಆ್ಯಂಡ್ ಎಥಿಕ್ಸ್’ ಎಂಬ ಪರೀಕ್ಷೆಯೂ ನಿಗದಿಯಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಒಂದೋ ಬಿಕಾಂ ಅಥವಾ ಸಿಎ ಪರೀಕ್ಷೆ ಬರೆಯಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಕಾಂ ಪರೀಕ್ಷೆ ಬರೆಯದಿದ್ದರೆ ವಿದ್ಯಾರ್ಥಿಗಳ 1 ವರ್ಷದ ಭವಿಷ್ಯಕ್ಕೆ ಸಮಸ್ಯೆ ಆಗಲಿದೆ.
ವಿದ್ಯಾರ್ಥಿಗಳ ಪೋಷಕರು ಉದಯವಾಣಿಗೆ ಪ್ರತಿಕ್ರಿಯಿಸಿ ಸಿಎ ಪರೀಕ್ಷೆಯನ್ನು ಎಲ್ಲರೂ ಸುಲಭವಾಗಿ ಉತ್ತೀರ್ಣರಾಗಲು ಸಾಧ್ಯವಾಗುವುದಿಲ್ಲ. ಅದಕ್ಕೆ ಅಷ್ಟು ಶ್ರಮ ಬೇಕು. ಈಗ ಒಂದೇ ದಿನ 2 ಪರೀಕ್ಷೆ ಎದುರಾದರೆ ಸಿಎ ಪರೀಕ್ಷೆಗೆ ಸಿದ್ಧತೆ ಮಾಡಬೇಕಾ? ಬಿಕಾಂ ಬರೆಯುವುದಾ? ಎಂಬ ತಲೆಬಿಸಿ ಮಕ್ಕಳಿಗೆ ಕಾಡುತ್ತಿದೆ ಎಂದರು.
ಸಿಎ ಪರೀಕ್ಷೆ ಮೊದಲೇ ನಿಗದಿಯಾಗಿತ್ತು. ಆದರೆ ಮಹಾರಾಷ್ಟ್ರದಲ್ಲಿ ಎದುರಾದ ಸಮಸ್ಯೆಯ ಕಾರಣ ದಿಂದ ಜ.15ಕ್ಕೆ ಇದ್ದ ಸಿಎ ಪರೀಕ್ಷೆಯನ್ನು ಜ.19ಕ್ಕೆ ನಿಗದಿ ಮಾಡಲಾಗಿದೆ. ಮಂಗಳೂರು ವಿವಿ ಪರೀಕ್ಷೆಗೆ ಮುನ್ನವೇ ದಿನಾಂಕ ಫಿಕ್ಸ್ ಆಗಿತ್ತು. ಇದು ಈಗ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀಳುವ ಸಾಧ್ಯತೆ ಗೋಚರಿಸಿದೆ.
ದಿನಾಂಕ ಮುಂದೂಡಿಕೆಗೆ ಮನವಿ
ಈ ಮಧ್ಯೆ ಜ.15ಕ್ಕೆ ನಿಗದಿಯಾಗಿದ್ದ ಮಂಗಳೂರು ವಿವಿಯ ಪರೀಕ್ಷೆಯೊಂದನ್ನು (ಸರಕಾರ ರಜೆ ಪ್ರಕಟಿಸಿದ ಹಿನ್ನೆಲೆ) ರಾಜ್ಯ ಸರಕಾರದ ಸೂಚನೆ ಮೇರೆಗೆ ಜ.14ಕ್ಕೆ ನಿಗದಿ ಮಾಡಲಾಗಿದೆ. ಇದೇ ರೀತಿ ಜ.19ಕ್ಕೆ ಇರುವ ಪರೀಕ್ಷೆಯನ್ನು ಮರು ನಿಗದಿ ಮಾಡಲು ವಿವಿ ಕ್ರಮ ಕೈಗೊಳ್ಳುವಂತೆ ಪೋಷಕರು ವಿವಿಯ ಗಮನ ಸೆಳೆದಿದ್ದಾರೆ.




