ಬೆಂಗಳೂರು: ಕಾಲ್ ಸೆಂಟರ್ ಉದ್ಯೋಗಿಗಳ ಅಪಹರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಾನ್‌ಸ್ಟೇಬಲ್ ಸೇರಿ 8 ಮಂದಿ ಆರೋಪಿಗಳು ತಾವೂ ಮಾಡಿಕೊಂಡಿದ್ದ ಸಾಲ ತೀರಿಸಲು ಕೃತ್ಯ ಎಸಗಿದ್ದಾಗಿ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೋಲಾರ ನಿವಾಸಿಗಳಾದ ಜಬಿವುಲ್ಲ (30), ಪವನ್ (30), ಅತೀಕ್ (30), ಭರತ್ (26), ಪ್ರಸನ್ನಕುಮಾರ್ (26) ಕೆ.ಆರ್.ಪುರ ನಿವಾಸಿ ಶಾಬಾಜ್ ಅಹಮ್ಮದ್(45), ಅಹಮದಾಬಾದ್ ಮೂಲದ ತೇಜಸ್ ದೇವ್ (30) ಮತ್ತು ಕೋಲಾರ ಜಿಲ್ಲೆಯ ಮಾಲೂರು ಠಾಣೆ ಕಾನ್‌ಸ್ಟೇಬಲ್ ಚಲಪತಿ ಎಂಬವರನ್ನು ಬಂಧಿಸಲಾಗಿದೆ.
ಆರೋಪಿಗಳು ಕಾಲ್ ಸೆಂಟರ್ ಉದ್ಯೋಗಿಗಳಾದ ಪವನ್, ರಾಜ್‌ವೀರ್, ಆಕಾಶ್ ಮತ್ತು ಅನಸ್ ಅವರನ್ನು ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ದಾಖಲಾದ ದೂರಿನನ್ವಯ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ 4 ದಿನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಸಾಲ ತೀರಿಸಲು ಕೃತ್ಯ
ಆರೋಪಿಗಳ ಪೈಕಿ ಪವನ್, ಅತೀಕ್ ಹಾಗೂ ಕಾನ್‌ಸ್ಟೇಬಲ್ ಛಲಪತಿ ಹಾಗೂ ಇತರೆ ಆರೋಪಿಗಳು ಲಕ್ಷಾಂತರ ರೂ. ಸಾಲ ಮಾಡಿಕೊಂ ಡಿದ್ದರು. ಅಲ್ಲದೆ, ತೇಜಸ್ ದೇವ್ ಮತ್ತು ಪವನ್ ಈ ಹಿಂದೆ ಕಾಲ್ ಸೆಂಟರ್ ತೆರೆಯಲು ಮುಂದಾಗಿ, ಲಕ್ಷಾಂತರ ರೂ. ಕಳೆದುಕೊಂಡಿದ್ದರು. ಜತೆಗೆ ತೇಜಸ್ ದೇವ್‌ನ ಸಹೋದರಿ ಮದುವೆ ಮಾಡಬೇಕಿತ್ತು. ಕಾಲ್ ಸೆಂಟರ್‌ಗಳ ಉದ್ಯೋಗಿಗಳ ಅಪಹರಣಕ್ಕೆ ಸಂಚು ರೂಪಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ಬಿಪಿಒ ಮಾಹಿತಿ ಪಡೆದಿದ್ದ ತೇಜಸ್
ಆರೋಪಿಗಳ ಪೈಕಿ ತೇಜಸ್ ದೇವ್ ನಾಲೈದು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದು, ಪವನ್‌ನ ಸ್ನೇಹಿತನಾಗಿದ್ದಾನೆ. ವ್ಯವಹಾರದಲ್ಲಿ ನಷ್ಟ ಹೊಂದಿದ್ದರಿಂದ ಅಕ್ರಮವಾಗಿ ಹಣ ಸಂಪಾದಿಸಲು ಮುಂದಾಗಿದ್ದರು. ಅದರಂತೆ ಇತ್ತೀಚೆಗೆ ನಕಲಿ ಕಾಲ್ ಸೆಂಟರ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿ ಕೆಲ ಆರೋಪಿಗಳನ್ನು ಬಂಧಿಸಿದ್ದರು. ಅದರಂತೆ ನಗರದಲ್ಲಿ ಬಹುತೇಕ ನಕಲಿ ಕಾಲ್ ಸೆಂಟರ್‌ಗಳು ಇವೆ. ಅವುಗಳನ್ನೇ ಟಾರ್ಗೆಟ್ ಮಾಡಬೇಕೆಂದು, ತೇಜಸ್ ದೇವ್, ತನ್ನ ಸ್ನೇಹಿತನೊಬ್ಬನಿಗೆ ಪರಿಚಯಸ್ಥ ಯುವಕನನ್ನು ಕೆಲಸಕ್ಕೆ ಸೇರಿಸಬೇಕೆಂದು ಹೇಳಿ ಗ್ಲೋಬಲ್ ಕನೆಕ್ಟ್ಟೆಲಿಕಾಂ ಕಾಲ್ ಸೆಂಟರ್‌ನ ವಿಳಾಸ ಪಡೆದುಕೊಂಡಿದ್ದ. ಅದರಂತೆ ಸಂಚು ರೂಪಿಸಿ ಅಪಹರಣ ಮಾಡಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣಾಧಿಕಾರಿ ಎಸ್ಎಲ್ ಆರ್ ರೆಡ್ಡಿ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.




