ಕಾರ್ಕಳ: ಸೌಜನ್ಯಾ ಕೊಲೆ ಪ್ರಕರಣದಲ್ಲಿ ನಿರ್ದೋಷಿಯಾಗಿ ಬಿಡುಗಡೆಯಾಗಿರುವ ಕಾರ್ಕಳ ತಾಲೂಕಿನ ಬೈಲೂರಿನ ಸಂತೋಷ್ ರಾವ್ ನಿವಾಸಕ್ಕೆ ಬುಧವಾರ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸಹಿತ ಹಲವರು ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಸಂತೋಷ್ ರಾವ್ ಅವರ ತಂದೆ ನಿವೃತ್ತ ಶಿಕ್ಷಕರಾದ ಸುಧಾಕರ ರಾವ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಸುಧಾಕರ ಅವರಿಗೆ ತಲೆಗೂದಲು ಕ್ಷೌರ ಮಾಡಿಸಿ, ಹೊಸಬಟ್ಟೆ ತೊಡಿಸಿ ಪಾದಪೂಜೆ ಮಾಡಲಾಯಿತು. ಮನೆಗೆ ಸುಣ್ಣಬಣ್ಣ ಬಳಿಯಲಾಯಿತು.
ಬಳಿಕ ಮಾತನಾಡಿದ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ‘ಸೌಜನ್ಯಾ ಕೊಲೆ ಪ್ರಕರಣದಲ್ಲಿ ಸಂತೋಷ್ ರಾವ್ ಕುಟುಂಬ ಮಾನಸಿಕವಾಗಿ– ದೈಹಿಕವಾಗಿ ಬಹಳ ನೊಂದಿದೆ. ಕೊಲೆಗಾರ, ಅತ್ಯಾಚಾರಿ ಎಂಬ ಕಳಂಕದ ಕಾರಣಕ್ಕೆ ಸಂಬಂಧಗಳನ್ನು ಕಳೆದುಕೊಂಡಿದೆ. ಸಮಾಜದಿಂದ ದೂರವಿದ್ದು ದಯನೀಯ ಸ್ಥಿತಿಯಲ್ಲಿ ಬದುಕು ಸಾಗಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಸಮಾಜದ ಪರವಾಗಿ ಸಂತೋಷ್ ರಾವ್ ಕುಟುಂಬದ ಬಳಿ ಕ್ಷಮೆ ಕೇಳಬೇಕಾಗಿರುವುದು ನಮ್ಮ ಕರ್ತವ್ಯ’ ಎಂದರು.
ಸಂತೋಷ್ ರಾವ್ ಕುಟುಂಬಕ್ಕೆ ಹೊಸದಾಗಿ ಬದುಕು ಕಟ್ಟಿಕೊಡಬೇಕು. ನೈತಿಕವಾಗಿ ಕುಸಿದಿರುವ ಕುಟುಂಬಕ್ಕೆ ಆತ್ಮಸ್ಥೈರ್ಯ ಹಾಗೂ ಚೈತನ್ಯ ತುಂಬುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಒಡನಾಡಿ ಸಂಸ್ಥೆಯು ನೆರವು ನೀಡಲಿದೆ ಎಂದರು.