ಬೆಳಗಾವಿ: ಗೃಹಲಕ್ಷ್ಮಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಜನರಿಂದ ಹಣ ಪಡೆದರೆ ಅಥವಾ ಯೋಜನೆ ಅನುಷ್ಠಾನಕ್ಕೆ ನಿರ್ಲಕ್ಷ್ಯ ತೋರಿದರೆ, ಅಂತಹವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಎಚ್ಚರಿಕೆ ನೀಡಿದರು.
ಇಲ್ಲಿ ಸೋಮವಾರ(ಜು.24) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋಂದಣಿ ಪ್ರಕ್ರಿಯೆಗೆ ಜನರಿಂದ ಹಣ ಪಡೆಯುತ್ತಿದ್ದ ಮೂರು ಕೇಂದ್ರಗಳ ಲಾಗಿನ್ ಐಡಿ ಹಿಂಪಡೆಯಲಾಗಿದೆ. ಯೋಜನೆಯ ದುರ್ಬಳಕೆಯನ್ನು ತಡೆಯದೆ ಸರ್ಕಾರ ಸುಮ್ಮನೆ ಕುಳಿತಿಲ್ಲ ಎಂದು ಸ್ಪಷ್ಟಪಡಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಗೆ ಫಲಾನುಭವಿಗಳಿಂದ ಹಣ ಪಡೆಯುವುದು ಕಂಡುಬಂದರೆ, ಅಂತಹವರ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಹಿಂದಕ್ಕೆ ಪಡೆಯಬೇಕು. ನಿಯಮ ಗಾಳಿಗೆ ತೂರಿದವರ ವಿರುದ್ಧ ಪ್ರಕರಣವನ್ನೂ ದಾಖಲಿಸಬೇಕೆಂದು ಸೂಚಿಸಲಾಗಿದೆ. ಎಲ್ಲಿಯೇ ಹಣ ಪಡೆಯುತ್ತಿರುವುದು ಕಂಡುಬಂದರೆ ತಹಶೀಲ್ದಾರರು, ಪಿಡಿಒಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು. ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ಕೊಡಬೇಕು ಎಂದರು.
ಗೃಹಲಕ್ಷ್ಮಿ ಯೋಜನೆ ನೋಂದಣಿ ಕಾರ್ಯವನ್ನು ನಾವು ಉಚಿತವಾಗಿ ಮಾಡಿಸಿಕೊಳ್ಳುತ್ತಿಲ್ಲ. ಪ್ರತಿ ಅರ್ಜಿ ಅಪ್‌ಲೋಡ್ ಮಾಡುವವರಿಗೆ ಸರ್ಕಾರದಿಂದಲೇ ರೂ.12 ಕೊಡುತ್ತಿದ್ದೇವೆ. ಹಾಗಾಗಿ ಜನರು ಯಾರಿಗೂ ಹಣ ಕೊಡಬೇಕಿಲ್ಲ ಎಂದು ಹೇಳಿದರು.