ಮಂಗಳೂರು: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಹಸಿವು ಮುಕ್ತ ಕರ್ನಾಟಕದ ಪರಿಕಲ್ಪನೆಯೊಂದಿಗೆ ಅನ್ನಭಾಗ್ಯ ಯೋಜನೆಯಡಿ ಪ್ರತೀ ತಿಂಗಳು ಅರ್ಹ ಫಲಾನುಭವಿಗಳಿಗೆ ಪಡಿತರ ನೀಡಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 460 ನ್ಯಾಯಬೆಲೆ ಅಂಗಡಿಗಳಿದ್ದು ಒಟ್ಟು 451593 ಪಡಿತರ ಚೀಟಿಗಳಿವೆ.
ಅಂತ್ಯೋದಯ ಅನ್ನಯೋಜನೆಯಡಿ ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಒಟ್ಟು 23011 ಕುಟುಂಬಗಳು ಪಡಿತರ ಚೀಟಿಗಳನ್ನು ಹೊಂದಿದ್ದಾರೆ. ಯೋಜನೆಯಡಿ 114432 ಅಂತ್ಯೋದಯ ಫಲಾನುಭವಿಗಳು ಉಚಿತ ಪಡಿತರವನ್ನು ಪಡೆಯುತ್ತಿದ್ದಾರೆ. ಇವರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪ್ರತೀ ತಿಂಗಳು ಪಡಿತರ ಚೀಟಿಗೆ 35 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ.
ಆರ್ಥಿಕವಾಗಿ ಬಡತನದ ರೇಖೆಗಿಂತ ಕೆಳಮಟ್ಟದಲ್ಲಿರುವ ಒಟ್ಟು 254851 ಕುಟುಂಬಗಳಿದ್ದು ಅವುಗಳಿಗೆ ಆದ್ಯತಾ ಪಡಿತರ ಚೀಟಿಗಳನ್ನು ನೀಡಲಾಗಿದೆ. ಇವುಗಳಲ್ಲಿ ಒಟ್ಟು 10,16,210 ಫಲಾನುಭವಿಗಳಿದ್ದು, ಪ್ರತೀ ಫಲಾನುಭವಿಗೆ ಮಾಸಿಕ 5ಕೆ.ಜಿ ಯಂತೆ ಉಚಿತವಾಗಿ ಅಕ್ಕಿಯನ್ನು ನೀಡಲಾಗುತ್ತಿದೆ.