ಇಂಫಾಲ್: ಮಣಿಪುರದಲ್ಲಿ ಮತ್ತೆ ಅಶಾಂತಿ ಸ್ಥಿತಿಯಿದೆ. ಶಂಕಿತ ರಾಕೆಟ್ ದಾಳಿಯಲ್ಲಿ ಇಬ್ಬರು ಮಕ್ಕಳು ಅಸುನೀಗಿ ಅವರ ತಾಯಿ ಗಾಯಗೊಂಡ ಘಟನೆಯ ಬಳಿಕ ಮತ್ತೆ ಪ್ರತಿಭಟನೆಗಳು ಆರಂಭವಾಗಿದ್ದು, ಐದು ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಮೊಬೈಲ್ ಇಂಟರ್ನೆಟ್ ಸೇವೆಯನ್ನು ರದ್ದು ಮಾಡಲಾಗಿದೆ.

ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ತೌಬಾಲ್, ಕಕ್ಟಿಂಗ್ ಮತ್ತು ಬಿಷ್ಣುಪುರ್ ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ ಮಾಡಿ ಆದೇಶ ಹೊರಡಿಸಲಾಗಿದೆ. ಸೋಮವಾರ ತಡರಾತ್ರಿ ಶಂಕಿತ ರಾಕೆಟ್ ದಾಳಿ ನಡೆದ ಬಿಷ್ಣುಪುರದಲ್ಲಿ ಕರ್ಪ್ಯೂ ಕೂಡಾ ಹೇರಲಾಗಿದೆ.
ತಪ್ಪು ಮಾಹಿತಿ ಮತ್ತು ಸುಳ್ಳು ವದಂತಿಗಳು ಹರಡದಂತೆ ತಡೆಯಲು ಮತ್ತು ಸಾಮಾಜಿಕ ಶಾಂತಿ ಕದಡುವ ಚಟುವಟಿಕೆಗಳ ನಿಯಂತ್ರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಸಾರ್ವಜನಿಕ ಹಿತಾಸಕ್ತಿಯಿಂದ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದು/ಕಡಿತಗೊಳಿಸುವುದು ಅಗತ್ಯವಾಗಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದ್ದು, ಏಪ್ರಿಲ್ 7 ರಂದು ಮಧ್ಯಾಹ್ನ 2 ಗಂಟೆಯಿಂದ ನಿರ್ಬಂಧಗಳು ಜಾರಿಗೆ ಬರಲಿವೆ.
ಮೊಯಿರಾಂಗ್ ನಲ್ಲಿ ಆಗಿದ್ದೇನು?
ಮೈತೈ ಮತ್ತು ಕುಕಿ ಸಮುದಾಯಗಳ ನಡುವಿನ ಅಶಾಂತಿಯ ಕೇಂದ್ರ ಬಿಂದುವಾಗಿರುವ ಮೊಯಿರಾಂಗ್‌ನ ಟ್ರೋಂಗ್ಲಾಬಿ ಅವಾಂಗ್ ಲೈಕೈ ಗ್ರಾಮದಲ್ಲಿ ಶಂಕಿತ ಉಗ್ರಗಾಮಿಗಳು ಮನೆಯೊಂದರ ಮೇಲೆ ಸ್ಫೋಟಕವನ್ನು ಎಸೆದಿದ್ದು, ನಿದ್ರೆಯಲ್ಲಿದ್ದ 5 ವರ್ಷದ ಬಾಲಕ ಮತ್ತು ಆರು ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ್ದು, ಅವರ ತಾಯಿ ಗಾಯಗೊಂಡಿದ್ದಾರೆ.
ಈ ಘಟನೆಯು ಪ್ರತಿಭಟನೆಗೆ ಕಾರಣವಾಗಿದೆ. ಸ್ಥಳೀಯರು ಪೆಟ್ರೋಲ್ ಪಂಪ್ ಬಳಿ ಎರಡು ತೈಲ ಟ್ಯಾಂಕರ್‌ಗಳು ಮತ್ತು ಒಂದು ಟ್ರಕ್ ಗೆ ಬೆಂಕಿ ಹಚ್ಚಿದರು. ಪೊಲೀಸ್ ಠಾಣೆಯ ಹೊರಗೆ ಟೈರ್‌ಗಳನ್ನು ಸುಟ್ಟುಹಾಕಿದರು ಮತ್ತು ಪೊಲೀಸ್ ಹೊರಠಾಣೆಗೂ ಹಾನಿ ಮಾಡಿದರು. ಪರಿಸ್ಥಿತಿಯನ್ನು ಸರಿಪಡಿಸಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.




