ಕಲ್ಲಡ್ಕ: ಬಂಟ್ವಾಳ ತಾಲೂಕು ವೀರಕಂಬ ಗ್ರಾಮ ಪಂಚಾಯತ್ ವತಿಯಿಂದ ಮಕ್ಕಳ ಗ್ರಾಮ ಸಭೆಯು ಫೆ.20 ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೆಲಿಂಜದಲ್ಲಿ ಜರಗಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಜಿ ವೀರಕಂಬ ಶಾಲಾ ವಿದ್ಯಾರ್ಥಿನಿ ಕುಮಾರಿ ದನ್ವಿತ ಅವರು ವಹಿಸಿದ್ದರು. ಗ್ರಾಮ ಸಭೆಯಲ್ಲಿ ಭಾಗವಹಿಸಿದ ಮಕ್ಕಳು ಈ ವರ್ಷ ಶಾಲೆಯಲ್ಲಿ ಒಂದು ಬಾರಿಯೂ ಜಂತುಹುಳದ ಮಾತ್ರೆ ಹಾಗೂ ಕಬ್ಬಿನಾಂಶ ಸತ್ವದ ಮಾತ್ರೆ ನೀಡದಿರುದರ ಬಗ್ಗೆ ಪ್ರಶ್ನೆಗಳನ್ನು ಕೇಳಿದರು ಹಾಗೂ ಆರೋಗ್ಯ ಇಲಾಖೆ ಮಕ್ಕಳ ಆರೋಗ್ಯದ ಕಡೆ ಗಮನಹರಿಸದಕ್ಕೆ ಬೇಸರವನ್ನು ವ್ಯಕ್ತಪಡಿಸಿದರು.
ಪ್ರತಿವರ್ಷವೂ ಫೆಬ್ರವರಿ ಹಾಗೂ ಅಗಸ್ಟ್ ತಿಂಗಳಲ್ಲಿ ಮಕ್ಕಳಿಗೆ ಜಂತುಹುಳುವಿನ ಮಾತ್ರೆ ಹಾಗೂ ಕಬ್ಬಿನಾಂಶಯುಕ್ತ ಮಾತ್ರೆಗಳನ್ನು ಆರೋಗ್ಯ ಇಲಾಖೆಯ ಮೂಲಕ ವಿತರಿಸಲಾಗುತ್ತಿತ್ತು. ಆದರೆ ಇನ್ನೂ ಈ ವರ್ಷದ ಶಾಲಾ ಅವಧಿ ಮುಗಿಯುತ್ತ ಬಂದರೂ ಆರೋಗ್ಯ ಇಲಾಖೆ ಈ ಬಗ್ಗೆ ಗಮನ ಹರಿಸದೆ ಇರುದು ವಿಪರ್ಯಾಸವಾಗಿದೆ.
ವೀರಕಂಬ ಗ್ರಾಮ ವ್ಯಾಪ್ತಿಯ ಮೂರು ಶಾಲೆಗಳಾದ ಬಾಯಿಲ, ಮಜಿ, ಕೆಲಿಂಜ ಶಾಲೆಯಿಂದ ಮಕ್ಕಳು ತಮ್ಮ ಶಾಲೆಗೆ ಬೇಕಾದ ಅಗತ್ಯ ಬೇಡಿಕೆಗಳ ಮನವಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ನೀಡಿದರು.
ಈ ಸಭೆಯಲ್ಲಿ ವೀರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಲಿತ, ಉಪಾಧ್ಯಕ್ಷರಾದ ಜನಾರ್ಧನ ಪೂಜಾರಿ ನಾರುಕೋಡಿ, ಪಂಚಾಯತ್ ಸದಸ್ಯರುಗಳಾದ ಗೀತಾ ಜಯಶೀಲ ಗಾಂಭೀರ್, ಜಯಪ್ರಸಾದ್, ಸಂದೀಪ್, ಅಂಗನವಾಡಿ ಮೇಲ್ವಿಚಾರಕಿ ರೂಪಕಲ, ವಿಟ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಇಂದಿರಾ ನಾಯ್ಕ್, ವೀರಕಂಬ ಗ್ರಾಮ ವ್ಯಾಪ್ತಿಯ ಕಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಜ್ಯೋತಿ ಕೆ.ಎನ್, ಕಲ್ಲಡ್ಕ ಕ್ಲಸ್ಟರ್ ಸಿ.ಆರ್.ಪಿ ಜ್ಯೋತಿ ಹಾಗೂ ಗ್ರಾಮ ವ್ಯಾಪ್ತಿಯ ಶಾಲೆಗಳ ಮಕ್ಕಳು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುಷ್ಪ ಸ್ವಾಗತಿಸಿ, ಕೆಲಿಂಜ ಶಾಲಾ ಮುಖ್ಯ ಶಿಕ್ಷಕ ತಿಮ್ಮಪ್ಪ ನಾಯ್ಕ ಅವರು ವಂದಿಸಿದರು.