ಶಿಕ್ಷಣಕ್ಕೆ ಬೇಕಾದ ಪೂರಕ ಸನ್ನಿವೇಶಗಳನ್ನು ಶಾಲಾ ಮಟ್ಟದಲ್ಲಿ ಒದಗಿಸಿದಾಗ ಶಿಕ್ಷಣವು ಗಟ್ಟಿಯಾಗುತ್ತದೆ: ರೊಟೇರಿಯನ್ ಗಣೇಶ್ ಶೆಟ್ಟಿ

Share with

ಕಲ್ಲಡ್ಕ: ಶಿಕ್ಷಣದ ಬೆಲೆ, ಶಿಕ್ಷಕನಿಗೆ ಇರುವ ಮಹತ್ವ, ಶಿಕ್ಷಣದ ಆದರ್ಶತೆಯು ವಿದ್ಯಾರ್ಥಿಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಮೂಡಿ ಬಂದಾಗ ಶಿಕ್ಷಣದ ಮೇಲೆ ಒಲವು ಮೂಡುತ್ತದೆ ಹಾಗೂ ಕಲಿಕೆಯ ಕಡೆಗೆ ಗಮನವನ್ನು ಹರಿಸಲು ಬೇಕಾದ ಮಾನಸಿಕ ತಯಾರಿಯನ್ನು ಮಾಡಲು ಸಹಾಯವಾಗುತ್ತದೆ, ತನ್ನ ಗೆಳೆಯರ ಜೊತೆ ಸಂತಸದಿಂದ ಕಲಿತಾಗ ಶಿಕ್ಷಣವು ಆನಂದದಾಯಕವಾಗಿರುತ್ತದೆ ಅದಕ್ಕೆ ಬೇಕಾದ ಪೂರಕ ಸನ್ನಿವೇಶಗಳನ್ನು ಶಾಲಾ ಮಟ್ಟದಲ್ಲಿ ಒದಗಿಸಿದಾಗ ಶಿಕ್ಷಣವು ಗಟ್ಟಿಯಾಗುತ್ತದೆ ಎಂದು ರೋಟರಿ ಕ್ಲಬ್ ಬಿ ಸಿ ರೋಡ್ ಸಿಟಿ ಇದರ ಅಧ್ಯಕ್ಷರಾದ ರೊಟೇರಿಯನ್ ಗಣೇಶ್ ಶೆಟ್ಟಿ ಅಭಿಪ್ರಾಯ ಪಟ್ಟರು.

ಮಜಿ ವೀರಕಂಭ ಪೂರ್ವ ಪ್ರಾಥಮಿಕ ತರಗತಿ ಮಕ್ಕಳ ಕಿಂಡರ್ ಗಾರ್ಟನ್ ಪದವಿಯನ್ನು ಪ್ರದಾನ ಮಾಡಲಾಯಿತು.

ಅವರು ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭ ಇಲ್ಲಿನ ಪೂರ್ವ ಪ್ರಾಥಮಿಕ ತರಗತಿ ಮಕ್ಕಳ ಕಿಂಡರ್ ಗಾರ್ಟನ್ ಪದವಿಯನ್ನು ಪ್ರದಾನ ಮಾಡಿ ಮಾತನಾಡಿದರು. ಏಪ್ರಿಲ್.3ರಂದು ಸಮಾಜ ಶಿಕ್ಷಣಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಸನ್ನದ್ದವಾಗಿದೆ. ಒಂದು ಶಾಲೆಯ ವ್ಯವಸ್ಥೆಗೆ ಪೂರಕವಾಗಿ ಆ ಶಾಲೆಯ ಶಿಕ್ಷಕರು, ಸಂಘ ಸಂಸ್ಥೆಗಳು, ಪೋಷಕರು ಒಟ್ಟಾಗಿ ಸೇರಿದಾಗ ಶಾಲಾ ವಿದ್ಯಾರ್ಥಿಗಳ ಸರ್ವಾಂಗಣ ಬೆಳವಣಿಗೆ ಸಾಧ್ಯವಾಗುತ್ತದೆ, ಕೇವಲ ಪಾಠಗಳಷ್ಟೇ ಅಲ್ಲ ಅವುಗಳ ಜೊತೆಗೆ ಉತ್ತಮ ಆಟಗಳು, ಹವ್ಯಾಸಗಳು ಜೊತೆಯಾದಾಗ ಮಗುವಿನ ಕಲಿಕೆಯು ಆಸಕ್ತಿದಾಯಕವಾಗಿದ್ದು ಅದನ್ನು ಮಗು ಇಷ್ಟಪಟ್ಟು ಕಲಿಯುತ್ತದೆ ಆಗ ತನ್ನಿಂತಾನೆ ಅದು ಪ್ರಗತಿಯನ್ನು ಸಾಧಿಸುತ್ತದೆ, ಎಂಬುದಾಗಿ ಮಜಿ ಶಾಲಾ ದತ್ತು ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಮಾತಾ ಡೆವಲಪರ್ಸ್ ಸುರತ್ಕಲ್ ನ ಮ್ಯಾನೇಜಿಂಗ್ ಡೈರೆಕ್ಟರ್ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ಇವರು ಅಭಿಪ್ರಾಯ ಪಟ್ಟರು.

ಯಾವುದೇ ಸಂಘ ಸಂಸ್ಥೆಗಳು ಮಕ್ಕಳಿಗೆ ಶಿಕ್ಷಣಕ್ಕೆ ಯಾವತ್ತೂ ಸಹಾಯವನ್ನು ಮಾಡುತ್ತಲೇ ಬಂದಿವೆ ಮಗುವಿನ ಕಲಿಕೆಗೆ ಕೇವಲ ಪೋಷಕರಷ್ಟೇ ಅಲ್ಲದೆ ಹಲವಾರು ಮಹನೀಯರು ಇದಕ್ಕೆ ಕೈಜೋಡಿಸಿದಾಗ ಉತ್ತಮ ಶಿಕ್ಷಕ ಸಮಾಜವನ್ನು ಕಾಣಲು ಸಾಧ್ಯ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಮಜಿ ಶಾಲೆಗೆ ಸತತ 8 ವರ್ಷಗಳಿಂದ ಉಚಿತವಾಗಿ ತರಕಾರಿ ಪೂರೈಸುತ್ತಿರುವ ಚಂದ್ರಿಕಾ ವೆಜಿಟೇಬಲ್ಸ್ ಮೆಲ್ಕಾರ್ ಇದರ ಮಾಲಕರಾದ ಮೊಹಮ್ಮದ್ ಶರೀಫ್ ಇವರು ಮಾತನಾಡಿದರು.

ಶಾಲೆ ಸಮಾಜದ ಕನ್ನಡಿಯಂತೆ ಇರುತ್ತದೆ ಶಿಕ್ಷಕರು ಉತ್ತಮ ಸಾರಥಿಯಾಗಿ ಮಗುವಿನ ಶೈಕ್ಷಣಿಕ ವಿಚಾರಗಳಿಗೆ ಸ್ಪಂದಿಸಿದಾಗ ಉತ್ತಮ ನಾಗರಿಕನಾಗಿ ಬೆಳೆಯುವುದರಲ್ಲಿ ಸಂದೇಹವಿಲ್ಲ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಜಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕೊರಗಪ್ಪ ನಾಯ್ಕ ಇವರು ಅಧ್ಯಕ್ಷೀಯ ಮಾತುಗಳನ್ನು ಆಡಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಕಲಿಕಾ ಪ್ರಮಾಣ ನೀಡಲಾಯಿತು. ಪೂರ್ವ ಪ್ರಾಥಮಿಕ ತರಗತಿಯ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದಲ್ಲಿ ಕಲಿತ ಚಟುವಟಿಕೆಗಳ ಪ್ರದರ್ಶನ ಹಾಗೂಮಕ್ಕಳ ಪೋಷಕರದೊಂದಿಗೆ ಮುಕ್ತವಾಗಿ ಚರ್ಚಿಸಿ ಸೂಕ್ತ ಸಲಹೆಗಳನ್ನು ಪಡೆಯಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟ ಆಗ್ನೆಸ್ ಮಂಡೋನ್ಸಾ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಶಿಕ್ಷಕಿ ಹರಿಣಾಕ್ಷಿ ವಂದಿಸಿದರು, ಪೂರ್ವ ಪ್ರಾಥಮಿಕ ಶಿಕ್ಷಕಿರಾದ ಹೇಮಲತಾ ಹಾಗೂ ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕಿಯರು ಸಹಕರಿಸಿದರು.


Share with

Leave a Reply

Your email address will not be published. Required fields are marked *