ನವದೆಹಲಿ, ಫೆಬ್ರುವರಿ 26: ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯನ್ನು ಹಲವಾರು ವರ್ಷಗಳಿಂದ ತಮ್ಮ ಬಿಗಿಮುಷ್ಟಿಗಳಲ್ಲಿ ಇಟ್ಟುಕೊಂಡಿದ್ದ ಚೀನೀ ಕಂಪನಿಗಳ (chinese smarphone companies) ಪಾರಮ್ಯ ಮೊದಲ ಬಾರಿಗೆ ದುರ್ಬಲಗೊಂಡಿದೆ. ಭಾರತದಲ್ಲಿ ಅದು ನಿರ್ಮಿಸಿಕೊಂಡಿದ್ದ ಭದ್ರಕೋಟೆಯಲ್ಲಿ ಬಿರುಕು ಮೂಡಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಕಳೆದ ಹಣಕಾಸು ವರ್ಷದಲ್ಲಿ (2024-25) ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ 9 ಚೀನೀ ಬ್ರ್ಯಾಂಡ್ ಸ್ಮಾರ್ಟ್ಫೋನ್ ಕಂಪನಿಗಳ ಆದಾಯದಲ್ಲಿ ಕುಸಿತವಾಗಿದೆ. ಶವೋಮಿ, ಓಪ್ಪೋ, ಒನ್ಪ್ಲಸ್ ಇತ್ಯಾದಿ ಕಂಪನಿಗಳ ಆದಾಯದಲ್ಲಿ ಇಳಿಮುಖವಾಗಿದೆ. ಭಾರತದಲ್ಲಿ ಚೀನೀ ಕಂಪನಿಗಳು ವಾರ್ಷಿಕ ಆದಾಯದಲ್ಲಿ ಇಳಿಕೆ ಕಂಡಿದ್ದು ಇದೇ ಮೊದಲ ಬಾರಿ ಎಂದು ಹೇಳಲಾಗಿದೆ.
ವರದಿ ಪ್ರಕಾರ, ಭಾರತದಲ್ಲಿ ಬ್ಯುಸಿನೆಸ್ ಮಾಡುತ್ತಿರುವ ಚೀನಾದ 9 ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಕಂಪನಿಗಳ ಒಟ್ಟಾರೆ ಆದಾಯ 2024-25ರಲ್ಲಿ ಶೇ. 4.5ರಷ್ಟು ಕಡಿಮೆ ಆಗಿದೆ. ಹಿಂದಿನ ವರ್ಷದಲ್ಲಿ ಈ ಕಂಪನಿಗಳು ಶೇ. 42ರಷ್ಟು ಆದಾಯ ಹೆಚ್ಚಳ ಕಂಡಿದ್ದವು.
ಒಟ್ಟಾರೆ ಫೋನ್ ಮಾರಾಟ ಸಂಖ್ಯೆಯಲ್ಲಿ ಚೀನೀ ಪ್ರಾಬಲ್ಯ ಮುಂದುವರಿಕೆ
ಅತಿಹೆಚ್ಚು ಸ್ಮಾರ್ಟ್ಫೋನ್ಗಳು ಮಾರಾಟ ಆಗುತ್ತಿರುವುದು ಚೀನೀ ಬ್ರ್ಯಾಂಡ್ನವೇ. 2024-25ರಲ್ಲಿ ಭಾರತದಲ್ಲಿ ಮಾರಾಟವಾದ ಸ್ಮಾರ್ಟ್ಫೋನ್ಗಳಲ್ಲಿ ಚೀನೀ ಕಂಪನಿಗಳ ಪಾಲು ಶೇ. 73-75ರಷ್ಟು ಇದೆ. ಆದರೆ, ಒಟ್ಟಾರೆ ಮಾರಾಟ ಮೌಲ್ಯದಲ್ಲಿ ಚೀನೀ ಕಂಪನಿಗಳ ಪಾಲು ಕಡಿಮೆ ಆಗಿದೆ. 2023ರಲ್ಲಿ ಒಟ್ಟಾರೆ ಮಾರಾಟ ಮೌಲ್ಯದಲ್ಲಿ ಚೀನೀ ಪಾಲು ಶೇ. 54 ಇತ್ತು. 2024ರಲ್ಲಿ ಅದು ಶೇ. 48ಕ್ಕೆ ಇಳಿಕೆ ಆಗಿದೆ.
20,000 ರೂಗಿಂತ ಕಡಿಮೆ ಬೆಲೆಯ ಸ್ಮಾರ್ಟ್ಫೊನ್ಗಳ ಮಾರಾಟ ಮೌಲ್ಯದಲ್ಲಿ ಚೀನೀ ಕಂಪನಿಗಳ ಪಾಲು 2023ರಲ್ಲಿ ಶೇ. 38 ಇದ್ದದ್ದು 2025ರಲ್ಲಿ ಶೇ. 29ಕ್ಕೆ ಇಳಿದಿದೆ.
ಬಜೆಟ್ ಫೋನ್ಗಳ ಮಾರಾಟ ಪ್ರಮಾಣ ಕಡಿಮೆ ಆಗುತ್ತಿದೆ. ಹೆಚ್ಚಿನ ಮೌಲ್ಯದ ಸ್ಮಾರ್ಟ್ಫೋನ್ಗಳ ಮಾರಾಟ ಏರುತ್ತಿರುವುದನ್ನು ಇದು ತೋರಿಸುತ್ತದೆ. 45,000 ರೂಗಿಂತ ಹೆಚ್ಚಿನ ಮೌಲ್ಯದ ಪ್ರೀಮಿಯಮ್ ಸೆಗ್ಮೆಂಟ್ ಸ್ಮಾರ್ಟ್ಫೋನ್ಗಳ ರೀಟೇಲ್ ಮಾರಾಟ ಮೌಲ್ಯ 2023ರಲ್ಲಿ ಶೇ. 36 ಇದ್ದದ್ದು 2025ರಲ್ಲಿ ಶೇ. 47ಕ್ಕೆ ಏರಿದೆ.
ಉನ್ನತ ಸ್ತರದ ಫೋನ್ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದರ ಲಾಭ ಆ್ಯಪಲ್ ಮತ್ತು ಸ್ಯಾಮ್ಸುಂಗ್ ಕಂಪನಿಗಳಿಗೆ ದಕ್ಕುತ್ತಿದೆ. 2024-25ರಲ್ಲಿ ಭಾರತದಲ್ಲಿ ಆ್ಯಪಲ್ನ ಮಾರಾಟ ಆದಾಯ ಶೇ. 18ರಷ್ಟು ಹೆಚ್ಚಿದರೆ, ಸ್ಯಾಮ್ಸುಂಗ್ ಶೇ. 12ರಷ್ಟು ಹೆಚ್ಚು ಮಾರಾಟ ಕಂಡಿದೆ.
ಚೀನೀ ಕಂಪನಿಗಳ ಪೈಕಿ ವಿವೊ ಉತ್ತಮ ಸಾಧನೆ ತೋರಿದೆ. ಶೇ. 11ರಷ್ಟು ಆದಾಯ ಏರಿಕೆ ಕಂಡಿದೆ. ಪ್ರೀಮಿಯಮ್ ಸೆಗ್ಮೆಂಟ್ನಲ್ಲಿ ಇದರ ಪ್ರಬಲ ಉಪಸ್ಥಿತಿ ಇರುವುದರಿಂದ ಆದಾಯ ಕಾಯ್ದುಕೊಳ್ಳಲು ಅದಕ್ಕೆ ಸಾಧ್ಯವಾಗಿದೆ.





