ಶಿವಮೊಗ್ಗ:ಧರ್ಮಸ್ಥಳದಲ್ಲಿ ಹಲವು ಶವಗಳನ್ನು ಹೂತು ಹಾಕಿರುವುದಾಗಿ ಹೇಳಿ ಎಸ್ಐಟಿ ತನಿಖೆ ನಡೆಯುವಂತೆ ಮಾಡಿ, ಬಳಿಕ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಮಾಸ್ಕ್ಮ್ಯಾನ್ ಚಿನ್ನಯ್ಯನನ್ನು ಇಲ್ಲಿನ ಸೋಗಾನೆಯ ಕೇಂದ್ರ ಕಾರಾಗೃಹದಿಂದ ಇಂದು ಬಿಡುಗಡೆ ಮಾಡಲಾಗಿದೆ.

ಚಿನ್ನಯ್ಯನಿಗೆ ನವೆಂಬರ್ 24ರಂದು ಬೆಳ್ತಂಗಡಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ ಚಿನ್ನಯ್ಯ ಕೋರ್ಟ್ ಆದೇಶದಂತೆ ವೈಯಕ್ತಿಕ ಬಾಂಡ್ ಹಾಗೂ ಇತರೆ ಅಂಶಗಳನ್ನು ಸಲ್ಲಿಸದ ಹಿನ್ನೆಲೆಯಲ್ಲಿ, ಜಾಮೀನು ನೀಡುವ ಪ್ರಕ್ರಿಯೆ ವಿಳಂಬವಾಗಿತ್ತು. ಹೀಗಾಗಿ ಆತ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿಯೇ ಇದ್ದ.
ಚಿನ್ನಯ್ಯನ ಪತ್ನಿ ಮಲ್ಲಿಕಾ ಬೆಳ್ತಂಗಡಿ ನ್ಯಾಯಾಲಯದಲ್ಲಿ ಬುಧವಾರ ಜಾಮೀನು ಪ್ರಕ್ರಿಯೆ ಮುಗಿಸಿದ ಬಳಿಕ ಇಂದು ಬೆಳಗ್ಗೆ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಆಗಿದ್ದಾನೆ. ಚಿನ್ನಯ್ಯನ ಪತ್ನಿ ಮಲ್ಲಿಕಾ, ಆತನ ಸಹೋದರಿ, ಸಹೋದರಿಯ ಗಂಡ, ವಕೀಲರ ಕಾರಿನ ಚಾಲಕ ಜೈಲಿನ ಬಳಿ ಆತನನ್ನು ಕರೆದೊಯ್ಯಲು ಆಗಮಿಸಿದ್ದರು.
ಬುಧವಾರ ಸಂಜೆಯೇ ಕಾರಾಗೃಹಕ್ಕೆ ಕೋರ್ಟ್ ಆದೇಶ ಬಂದಿತ್ತು. ಇದರಿಂದ ಇಂದು(ಡಿ.18) ಬೆಳಗ್ಗೆ ಜೈಲಿನಿಂದ ಚಿನ್ನಯ್ಯ ಬಿಡುಗಡೆ ಆಗಿದ್ದಾನೆ. ಈತ ಪ್ರತಿ ಎರಡು ದಿನಕ್ಕೊಮ್ಮೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು. ಹಾಗೂ ಮಾಧ್ಯಮಗಳೊಂದಿಗೆ ಮಾತನಾಡಬಾರದು ಎಂದು ಬೆಳ್ತಂಗಡಿ ನ್ಯಾಯಾಲಯವು ಷರತ್ತು ವಿಧಿಸಿದೆ.
ಪ್ರಕರಣದ ಹಿನ್ನೆಲೆ:ದೂರುದಾರ – ಸಾಕ್ಷಿಯಾಗಿರುವ ಮಾಜಿ ನೈರ್ಮಲ್ಯ ಕಾರ್ಮಿಕ, ಧರ್ಮಸ್ಥಳ ಗ್ರಾಮದಲ್ಲಿ ತಾನು ರಹಸ್ಯವಾಗಿ ಹಲವು ಮೃತದೇಹಗಳನ್ನು ವಿಲೇವಾರಿ ಮಾಡಿದ್ದೆ ಎಂದು ವಕೀಲರ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದ. ಅದರ ಪ್ರಕಾರ ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ಜುಲೈ 4ರಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣವು ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು.
ಹಲವಾರು ಮೃತದೇಹಗಳನ್ನು ವಿಲೇವಾರಿ ಮಾಡಿದ್ದು, ಪ್ರಸ್ತುತ ತನಗೆ ಪಾಪಪ್ರಜ್ಞೆ ಕಾಡುತ್ತಿದೆ. ತನಗೆ ಹಾಗೂ ತನ್ನ ಕುಟುಂಬಕ್ಕೆ ಕಾನೂನಾತ್ಮಕವಾಗಿ ರಕ್ಷಣೆ ದೊರೆತ ಕೂಡಲೇ, ಈ ಅಪರಾಧ ಕೃತ್ಯಗಳನ್ನು ನಡೆಸಿದವರ ಸಂಪೂರ್ಣ ಮಾಹಿತಿ ಹಾಗೂ ತಾನು ಮೃತದೇಹಗಳನ್ನು ವಿಲೇವಾರಿ ಮಾಡಿದ ಸ್ಥಳಗಳನ್ನು ಪೊಲೀಸರಿಗೆ ತೋರಿಸಲು ಸಿದ್ದವಿರುವುದಾಗಿ ಮಾಸ್ಕ್ಮ್ಯಾನ್ ಚಿನ್ನಯ್ಯ ದೂರು ನೀಡಿದ್ದ.
ವ್ಯಕ್ತಿಯ ಹೇಳಿಕೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ, ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿತ್ತು. ಬಳಿಕ ದೂರುದಾರ ಗುರುತಿಸಿದ ಕಡೆಗಳಲ್ಲಿ ಭೂಮಿ ಅಗೆದು ಶೋಧ ಕಾರ್ಯ ಮಾಡಲಾಗಿತ್ತು. ಆದರೆ ಒಂದು ಕಡೆ ಮಾತ್ರ ಅವಶೇಷಗಳು ಸಿಕ್ಕಿದ್ದು, ಉಳಿದ ಸ್ಥಳಗಳಲ್ಲಿ ಏನೂ ಸಿಕ್ಕಿರಲಿಲ್ಲ. ಈ ಬೆನ್ನಲ್ಲೇ ಎಸ್ಐಟಿ ತಂಡವು ಚಿನ್ನಯ್ಯನನ್ನು ಬಂಧಿಸಿತ್ತು. ಬಳಿಕ ಆತನನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು.




