ಚಿನ್ನಯ್ಯನಿಗೆ ಆಶ್ರಯ ನೀಡಿದ ಪ್ರಕರಣ; ತಿಮರೋಡಿ ನಿವಾಸದ ಮೇಲೆ SIT ದಾಳಿ

Share with

ಬೆಳ್ತಂಗಡಿ: ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣದ ಸಂಬಂಧ ಎಸ್.ಐ.ಟಿ ಬಂಧಿಸಿರುವ ಆರೋಪಿ ಚಿನ್ನಯ್ಯ ಸಿ.ಎನ್.ಗೆ ಆಶ್ರಯ ನೀಡಿದ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದ ಮೇಲೆ ಆ.26 ರಂದು ಬೆಳಗ್ಗೆ 9:20 ರ ಸುಮಾರಿಗೆ ಎಸ್.ಐ.ಟಿ ತನಿಖಾಧಿಕಾರಿ ಜಿತೇಂದ್ರ ಕುಮಾ‌ರ್ ದಯಾಮ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಬೆಳ್ತಂಗಡಿ ನ್ಯಾಯಾಧೀಶರಿಂದ ಆ.25 ರಂದು ಸರ್ಚ್ ವಾರಂಟ್ ಪಡೆದುಕೊಂಡು ಆರೋಪಿ ಚಿನ್ನಯ್ಯನ ಜತೆಯಲ್ಲಿ ಕರೆದುಕೊಂಡು ಬಂದು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಬುರುಡೆ ಪ್ರಕರಣದಲ್ಲಿ ಆರೋಪಿ ಚಿನ್ನಯ್ಯನಿಗೆ ಉಜಿರೆಯ ನಿವಾಸದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಕಳೆದ ಎರಡು ತಿಂಗಳಿಂದ ಅಶ್ರಯ ನೀಡಿದ್ದರಿಂದ ಚಿನ್ನಯ್ಯನಿಗೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲು ಈ ದಾಳಿ ನಡೆಯುತ್ತಿದೆ ಎನ್ನಲಾಗಿದೆ.

ದಾಳಿ ವೇಳೆ ಮಹೇಶ್ ಶೆಟ್ಟಿ ಮತ್ತು ಸಹೋದರ ಮೋಹನ್ ಶೆಟ್ಟಿ ಮನೆಗೂ ಮೇಲೆ ದಾಳಿ ನಡೆಸಲಾಗಿದೆ.

ಬುರುಡೆ ಗ್ಯಾಂಗೆ ಪ್ರತಿ ಹಂತದಲ್ಲೂ ತಿಮರೋಡಿ ಮನೆಯಲ್ಲೇ ಸೇರುತ್ತಿದ್ದು ಎಲ್ಲ ಬುರುಡೆ ಪ್ಲಾನ್ ಇಲ್ಲಿಂದಲೇ ಆರಂಭವಾಗಿರುವ ಬಗ್ಗೆ ಎಸ್‌ಐಟಿಗೆ ಮಾಹಿತಿ ದೊರೆತಂತೆ ರೈಡ್ ಮಾಡಲಾಗಿದೆ ಎನ್ನಲಾಗಿದೆ.

ಇತ್ತೀಚೆಗೆ ನಡೆಸಿದ ಸುದ್ದಿಗೋಷ್ಠಿ, ಮಾಸ್ಕ್ ಕಳಚಿ ನಡೆಸಿದ ಸಂದರ್ಶನ, ಯೂಟೂಬರ್ ಸಮೀರ್ ನಡೆಸಿದ ಕೆಲ ವಿಡಿಯೋಗಳು ಇದೇ ಸ್ಥಳದಿಂದ ಮಾಡಿರುವುದಾಗಿ ಬಹಳ ಚರ್ಚೆಯಲ್ಲಿತ್ತು. ಹೀಗಾಗಿ ಮಹತ್ವದ ಸಾಕ್ಷಿ ಲಭಿಸಬಹುದಾದ ಹಿನ್ನೆಲೆ ದಾಳಿ ನಡೆಸಿದೆ.


Share with

Leave a Reply

Your email address will not be published. Required fields are marked *