ಬೆಂಗಳೂರು: ಎಂಟೂವರೆ ತಿಂಗಳ ಗರ್ಭಿಣಿ ವಕೀಲೆ ಒಬ್ಬರಿಗೆ ಸಿವಿಲ್ ನ್ಯಾಯಾಧೀಶರ ನೇರ ನೇಮಕಾತಿ ಮುಖ್ಯ ಪರೀಕ್ಷೆ ಬರೆಯಲು ವಿಶೇಷ ವ್ಯವಸ್ಥೆ ಮಾಡುವ ಮೂಲಕ ಹೈಕೋರ್ಟ್ ಪ್ರಶಂಸನೀಯವಾದ ನಿರ್ಧಾರವನ್ನು ಕೈಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ನ.18 ಮತ್ತು 19ರಂದು ನಡೆಯಲಿರುವ ಮುಖ್ಯ ಪರೀಕ್ಷೆ ಬರೆಯಲು ವಕೀಲೆ ನೇತ್ರಾವರಿಗೆ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರು ಅನುಮತಿಸಿದ್ದಾರೆ.
ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರುವ ನೇತ್ರಾವತಿ ಅವರು ಎಂಟೂವರೆ ತಿಂಗಳು ಗರ್ಭಿಣಿಯಾಗಿರುವುದರಿಂದ ಅವರ ಆರೋಗ್ಯ ಪರಿಸ್ಥಿತಿ ಸೂಕ್ಷ್ಮವಾಗಿದ್ದು, ಪ್ರವಾಸ ಮಾಡಲಾಗದು. ಇದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ಪರೀಕ್ಷೆ ಬರೆಯಲು ಅನುಮತಿಸುವಂತೆ ಕರ್ನಾಟಕ ಹೈಕೋರ್ಟ್‍ಗೆ ಮನವಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಪಿ.ಎಸ್ ದಿನೇಶ್ ಕುಮಾರ್, ಕೆ.ಸೋಮಶೇಖರ್, ಎಸ್. ಸುನಿಲ್ ದತ್ ಯಾದವ್, ಅಶೋಕ್ ಎಸ್. ಕಿಣಗಿ ಮತ್ತು ಎಂ.ನಾಗಪ್ರಸನ್ನ ಅವರನ್ನು ಒಳಗೊಂಡ ಸಿವಿಲ್ ನ್ಯಾಯಾಧೀಶರ ನೇಮಕಾತಿ ಸಮಿತಿಯು ನೇತ್ರಾವತಿ ಅವರ ಕೋರಿಕೆಗೆ ಒಪ್ಪಿಗೆ ಸೂಚಿಸಿದ್ದು, ಮುಖ್ಯ ನ್ಯಾಯಮೂರ್ತಿಗಳೂ ಮುದ್ರೆ ಹಾಕಿದ್ದಾರೆ.
ನೇತ್ರಾವತಿ ಅವರು ಪರೀಕ್ಷೆ ಬರೆಯಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ನ್ಯಾಯಾಲಯದ ಪರೀಕ್ಷಾ ಕೇಂದ್ರಕ್ಕೆ ನ್ಯಾಯಾಂಗ ಅಧಿಕಾರಿಯನ್ನು ವೀಕ್ಷಕರನ್ನಾಗಿ ವಿಶೇಷವಾಗಿ ನಿಯೋಜಿಸಲಾಗಿದೆ. ದಕ್ಷಿಣ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮೇಲ್ವಿಚಾರಣೆ ನಡೆಸಲಿದ್ದು, ತುರ್ತು ಸಂದರ್ಭ ಉದ್ಭವಿಸಿದರೆ ವೈದ್ಯಕೀಯ ವ್ಯವಸ್ಥೆ ಮಾಡುವಂತೆ ಅವರಿಗೆ ನಿರ್ದೇಶಿಸಲಾಗಿದೆ.