ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಮೊಬೈಲ್ ನಿಷೇಧ: ಸಿಎಂ ಗಂಭೀರ ಚಿಂತನೆ

Share with

ಬೆಂಗಳೂರು: ರಾಜ್ಯದಲ್ಲಿ ಶಾಲಾ ಮಕ್ಕಳಿಗೆ, ಅಂದರೆ 16 ವರ್ಷದೊಳಗಿನವರಿಗೆ ಮೊಬೈಲ್ ನಿಷೇಧ, ಸಾಮಾಜಿಕ ಜಾಲತಾಣಗಳ ನಿರ್ಬಂಧದ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಕ್ಕಳ ಮೊಬೈಲ್ ಮೋಹ, ಸಾಮಾಜಿಕ ಜಾಲತಾಣದ ಅತಿ ಬಳಕೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಶಾಲಾ ಮಕ್ಕಳಿಗೆ ಮೊಬೈಲ್‌ ನಿಷೇಧ ಮಾಡುವ ಬಗ್ಗೆ ಮುಂದಡಿ ಇಟ್ಟಿದ್ದಾರೆ.

ಶನಿವಾರ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ನಡೆದಿದ್ದ ಕುಲಪತಿಗಳ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಕ್ಕಳಲ್ಲಿ ಮೊಬೈಲ್ ಬಳಕೆಯ ಸಾಧಕ-ಬಾಧಕಗಳ ಬಗ್ಗೆ ಅಭಿಪ್ರಾಯವನ್ನು ಕೇಳಿದ್ದಾರೆಂದು ತಿಳಿದು w໐໖໖.

ಆಸ್ಟ್ರೇಲಿಯಾ ಮಾದರಿ ಉಲ್ಲೇಖ:

ಆಸ್ಟ್ರೇಲಿಯಾದಲ್ಲಿ 16 ವರ್ಷದ ಒಳಗಿನ ಮಕ್ಕಳಿಗೆ ಶಾಲೆಗಳಲ್ಲಿ ಮೊಬೈಲ್‌ ನಿಷೇಧಿಸಲಾಗಿದೆ. ನಮ್ಮಲ್ಲಿಯೂ ಕೆಲ ರಾಜ್ಯಗಳಲ್ಲಿ ಈ ಬಗ್ಗೆ ಚರ್ಚೆಗಳು ನಡೆದಿವೆ. ನೀವೆಲ್ಲ ಕುಲಪತಿಗಳಿದ್ದೀರಿ, ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಮುಖ್ಯಮಂತ್ರಿಗಳು ಕುಲಪತಿಗಳಲ್ಲಿ ಕೇಳಿದ್ದಾರೆ.

ಆಗ ಸಭೆಯಲ್ಲಿದ್ದ ಕೆಲವರು, ಇದು ಶಾಲಾ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ವಿಚಾರ ಎಂದು ಹೇಳಲು ಮುಂದಾದಾಗ, ನೀವು ಶಿಕ್ಷಣ ತಜ್ಞರಿದ್ದೀರಿ, ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಮುಖ್ಯಮಂತ್ರಿಗಳು ಸೂಚಿಸಿದರು. ಆಗ ಬಹುತೇಕ ಕುಲಪತಿಗಳು, ಮಕ್ಕಳಿಗೆ ಮೊಬೈಲ್ ನಿರ್ಬಂಧ ವಿಧಿಸುವುದರ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಕುಲಪತಿಯೊಬ್ಬರು ಖಾಸಗಿ ಶಾಲೆಗಳಲ್ಲಿ ಮಕ್ಕಳ ಅಂಕ, ಹಾಜರಾತಿ ಹೀಗೆ ಎಲ್ಲ ಮಾಹಿತಿಗಳು ಮೊಬೈಲ್‌ ಮೂಲಕವೇ ಪೋಷಕರನ್ನು ತಲುಪುತ್ತಿದೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ಆಗ ಮುಖ್ಯಮಂತ್ರಿಗಳು ಸರ್ಕಾರ ತೀರ್ಮಾನ ತೆಗೆದುಕೊಂಡರೆ ಅದನ್ನು ಎಲ್ಲರೂ ಪಾಲಿಸಬೇಕಾಗುತ್ತದೆ. ಈ ಬಗ್ಗೆ ವಿಚಾರ ಮಾಡೋಣ ಎಂಬುದಾಗಿ ಸಭೆಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

ರಾಜ್ಯದ ಸರ್ಕಾರಿ ಶಾಲೆಗಳಿಗೆ ಮಕ್ಕಳು ಮೊಬೈಲ್ ಕೊಂಡು ಹೋಗುವುದಕ್ಕೆ ಈಗಾಗಲೇ ನಿಷೇಧವಿದೆ. ಆದರೂ ಈ ನಿಷೇಧ ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕುಲಪತಿಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿ, ಸಾಧಕ-ಬಾಧಕಗಳ ಬಗ್ಗೆ ಅಭಿಪ್ರಾಯ ಕೇಳಿರುವುದು ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.


Share with

Leave a Reply

Your email address will not be published. Required fields are marked *