ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆಯಡಿ ಅಕ್ಷಯ ಕಾಲೇಜು ಪುತ್ತೂರು ವತಿಯಿಂದ ‘ನನ್ನ ಭಾರತಕ್ಕಾಗಿ ಯುವಜನತೆ – ಡಿಜಿಟಲ್ ಸಾಕ್ಷರತೆಗಾಗಿ ಯುವಜನತೆ’ ಎಂಬ ಆಶಯದೊಂದಿಗೆ ಆಯೋಜಿಸಲಾದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಶ್ರೀ ರಾಮಚಂದ್ರ ಪದವಿ ಪೂರ್ವ ವಿದ್ಯಾಲಯದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಶ್ರೀಮತಿ ಕಲಾವತಿ ಜಯಂತ್ ವಹಿಸಿದ್ದರು. ಅಧ್ಯಕ್ಷರಾದ ಶ್ರೀ ಜಯಂತ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಏಳು ದಿನಗಳ ಕಾಲ ಪೆರ್ನೆ ಪರಿಸರವನ್ನು ಆಯ್ಕೆ ಮಾಡಿಕೊಂಡು ಶಿಬಿರವನ್ನು ಯಶಸ್ವಿಯಾಗಿ ನಡೆಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು. ಶಿಬಿರಾರ್ಥಿಗಳ ಶ್ರಮ, ಶಿಸ್ತು ಮತ್ತು ಸಮರ್ಪಣಾ ಮನೋಭಾವವನ್ನು ಅವರು ವಿಶೇಷವಾಗಿ ಪ್ರಶಂಸಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಶೇಖರ್ ರೈ ಕೆ., ಪ್ರಾಂಶುಪಾಲರು, ಶ್ರೀ ರಾಮಚಂದ್ರ ವಿದ್ಯಾಲಯ ಅವರು ಉಪಸ್ಥಿತರಿದ್ದು, ಅಕ್ಷಯ ಕಾಲೇಜು ಈ ಬಾರಿ ನಮ್ಮ ಸಂಸ್ಥೆಯನ್ನು ಶಿಬಿರಕ್ಕಾಗಿ ಆಯ್ಕೆ ಮಾಡಿರುವುದು ಸಂತೋಷ ತಂದಿದೆ ಎಂದು ಹೇಳಿದರು. ಆರಂಭದಲ್ಲಿ ಸ್ವಲ್ಪ ಆತಂಕ ಇದ್ದರೂ, ಶಿಬಿರಾರ್ಥಿಗಳು ಏಳು ದಿನಗಳ ಕಾಲ ಶಿಸ್ತಿನಿಂದ ಕಾರ್ಯನಿರ್ವಹಿಸಿ ಪರಿಸರ ಸ್ವಚ್ಛತೆ, ಸಾಮಾಜಿಕ ಜಾಗೃತಿ ಹಾಗೂ ವಿವಿಧ ಚಟುವಟಿಕೆಗಳ ಮೂಲಕ ಉತ್ತಮ ಮಾದರಿಯನ್ನೇ ನಿರ್ಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನೋರ್ವ ಅತಿಥಿಯಾಗಿ ಶ್ರೀ ಸತ್ಯನಾರಾಯಣ ರೈ ಕೆ.ಎಂ., ಮುಖ್ಯಗುರುಗಳು, ಶ್ರೀ ರಾಮಚಂದ್ರ ಪ್ರೌಢಶಾಲೆ, ಅಯೋಧನಗರ-ಪೆರ್ನೆ ಮಾತನಾಡಿ, ಅಕ್ಷಯ ಸಂಸ್ಥೆಯ ಶಿಸ್ತುಬದ್ಧ ಕಾರ್ಯಪದ್ಧತಿ ಪೆರ್ನೆ ಪರಿಸರದ ಜನಮನ ಗೆದ್ದಿದೆ. ಅಯೋಧ್ಯನಗರವನ್ನು ಹಸಿರುಮಯವಾಗಿಸಲು ಶಿಬಿರಾರ್ಥಿಗಳು ಮಾಡಿದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಹಾಲು ಉತ್ಪಾದಕರ ಸಂಘದ ಸದಸ್ಯರಾದ ಶ್ರೀ ರಮೇಶ್ ಕೋಟ ಅವರು ಶಿಬಿರಾರ್ಥಿಗಳು ಶ್ರಮದಾನದ ಮೂಲಕ ಸುಂದರ ಉದ್ಯಾನವನ ನಿರ್ಮಿಸಿರುವುದನ್ನು ಕೊಂಡಾಡಿದರು.
ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಯಾದ ಶ್ರೀ ಅರ್ಪಿತ್ ಟಿ.ಎ. ಅವರು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ (NSS) ಎನ್ನುವುದು ಕೇವಲ ಒಂದು ಯೋಜನೆಯಲ್ಲ; ಅದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸ, ಸಾಮಾಜಿಕ ಹೊಣೆಗಾರಿಕೆ ಮತ್ತು ರಾಷ್ಟ್ರಭಕ್ತಿಯ ಮನೋಭಾವ ಬೆಳೆಸುವ ಶಕ್ತಿಯುತ ವೇದಿಕೆ ಎಂದು ಹೇಳಿದರು. ಶಿಬಿರದ ಯಶಸ್ಸಿಗೆ ಕೈಜೋಡಿಸಿದ ಎಲ್ಲಾ ಗಣ್ಯರು, ಶಿಕ್ಷಕರು, ಗ್ರಾಮಸ್ಥರು ಹಾಗೂ ಸ್ವಯಂಸೇವಕರಿಗೆ ಹೃತೂರ್ವಕ ಅಭಿನಂದನೆ ಸಲ್ಲಿಸಿದರು.
ಅನಂತರ ಅಕ್ಷಯ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ರಕ್ಷಣಾ ಟಿ.ಆರ್. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, NSS ಶಿಬಿರದಲ್ಲಿ ಕಲಿತ ಶಿಸ್ತು, ಸೇವಾ ಮನೋಭಾವ, ಸಹಕಾರ, ನಾಯಕತ್ವ ಹಾಗೂ ಜೀವನಮೌಲ್ಯಗಳನ್ನು ನಿತ್ಯ ಜೀವನದಲ್ಲೂ ಅಳವಡಿಸಿಕೊಂಡರೆ ಮಾತ್ರ ಶಿಬಿರದ ಸಾರ್ಥಕತೆ ಸಾಧ್ಯವೆಂದು ತಿಳಿಸಿದರು. ಸಮಾಜ ಸೇವೆಯ ಮೂಲಕವೇ ಒಳ್ಳೆಯ ನಾಗರಿಕರನ್ನು ರೂಪಿಸಬಹುದು ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು
ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿಯಾದಕು ಮೇಘ ಶ್ರೀ ಅವರು ಶಿಬಿರದ ಅವಧಿಯಲ್ಲಿ ಕೈಗೊಂಡ ಪರಿಸರ ಸ್ವಚ್ಛತಾ ಕಾರ್ಯಗಳು, ಜಾಗೃತಿ ಕಾರ್ಯಕ್ರಮಗಳು ಹಾಗೂ ಶಿಬಿರಾರ್ಥಿಗಳ ದಿನಚರಿಯ ಕುರಿತು ವಿವರಿಸಿದರು. ಎಲ್ಲಾ ಅತಿಥಿಗಳ ಸಮ್ಮುಕದಲ್ಲಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಯೋಜನಾಧಿಕಾರಿ ಶ್ರೀ ರಾಕೇಶ್ ಕೆ. ಅವರು ಶಿಬಿರದ ಯಶಸ್ಸಿಗೆ ತನು ಮನ ಧನ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ವಾರ್ಷಿಕ ಶಿಬಿರದಲ್ಲಿ ಉತ್ತಮ ಪ್ರದರ್ಶನ ನೀಡಿದ “ಧರ್ಮರಾಯ” ತಂಡಕ್ಕೆ ಟ್ರೋಫಿ ಪ್ರದಾನ ಮಾಡಲಾಯಿತು. ಸಹ ಯೋಜನಾಧಿಕಾರಿಗಳಾದ ಗಂಧರ್ವ ಮತ್ತು ಕು. ಸೌಜನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಬಿರಾರ್ಥಿ ಯಶಸ್ವಿ ಪ್ರಾರ್ಥನೆಯೊಂದಿಗೆ ಆರಂಭಿಸಿದರು. ಸ್ವಾಗತ ಭಾಷಣವನ್ನು ರಾಷ್ಟ್ರೀಯ ಸೇವಾ ಯೋಜನೆಯ ಘಟಕ-1ರ ನಾಯಕ ಜಿನ್ನೇಶ್ ನೆರವೇರಿಸಿದರು. ಧನ್ಯವಾದವನ್ನು ಘಟಕ-2ರ ನಾಯಕಿ ಕೋಮಲಾಕ್ಷಿ ಸಲ್ಲಿಸಿದರು. ಸಮಾರೋಪ ಸಮಾರಂಭದ ಸಂಪೂರ್ಣ ಕಾರ್ಯಕ್ರಮವನ್ನು ಶಿಬಿರಾರ್ಥಿ ಅಕ್ಷಿತ್ ಸಮರ್ಪಕವಾಗಿ ನಿರ್ವಹಿಸಿದರು.




