ಅಚ್ಚೇದಿನ್ ಬರುವುದಾಗಿ ಹೇಳಿದ್ದೇ ವಿನಾ ಜನರ ಖಾತೆಗೆ ನಯಾ ಪೈಸೆ ಹಣ ಬಿಜೆಪಿ ಕೊಟ್ಟಿಲ್ಲ: ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಶಾಸಕ ಅಶೋಕ್ ರೈ

Share with

ಪುತ್ತೂರು: ನಾವು ಅಧಿಕಾರಕ್ಕೆ ಬಂದರೆ ದೇಶದಲ್ಲಿ ಅಚ್ಚೇದಿನ್ ಕೊಡುತ್ತೇವೆ, ಜನರಿಗೆ ನೆಮ್ಮದಿಯ ಜೀವನ ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಜನರ ಖಾತೆಗೆ ನಯಾ ಪೈಸೆ ನೀಡಿಲ್ಲ ಮತ್ತು ನೆಮ್ಮದಿಯ ಜೀವನವನ್ನೂ ನೀಡಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ರೈ ಆರೋಪಿಸಿದರು. ಇವರು ಕೊಳ್ತಿಗೆ ವಲಯ ಕಾಂಗ್ರೆಸ್ ವತಿಯಿಂದ ಕೊಳ್ತಿಗೆ ಅಂಭೇಡ್ಕರ್ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಚುನಾವಣೆಯ ಸಂದರ್ಭದಲ್ಲಿ ರಾಜ್ಯದ ಜನತೆಗೆ ಕೊಟ್ಟಿದ್ದ ಗ್ಯಾರಂಟಿಯನ್ನು ಕಾಂಗ್ರೆಸ್ ಈಡೇರಿಸಿದೆ. ಜನರ ಖಾತೆಗೆ ಹಣವನ್ನು ನೀಡಿದ್ದೇವೆ, ಅಕ್ಕಿಯನ್ನು ನೀಡಿದ್ದೇವೆ, ಉಚಿತ ಕರೆಂಟ್ , ಮತ್ತು ಗೃಹಲಕ್ಷಿ ಯೋಜನೆಯ ೨ ಸಾವಿರ ಹಣ ಮತ್ತು ಉಚಿತ ಬಸ್ ಪ್ರಯಾಣವನ್ನು ಮಾಡಿದ್ದೇವೆ ಇಂಥಹ ಒಂದೇ ಒಂದು ಕಾರ್ಯಕ್ರಮ ಬಿಜೆಪಿ ನೀಡಿದೆಯಾ? ಎಂದು ಪ್ರಶ್ನಿಸಿದರು. ಬಡವರು ನೆಮ್ಮದಿಯ ಜೀವನ ನಡೆಸಬೇಕಾದರೆ ಕಾಂಗ್ರೆಸ್ ಅಧಿಕಾರದಲ್ಲಿರಬೇಕು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಚುನಾವಣೆಯ ಸಂದರ್ಭದಲ್ಲಿ ಜನರಲ್ಲಿ ಕೋಮುಭಾವನೆಯನ್ನು ಬಿತ್ತಿ ಧರ್ಮದ ಆಧಾರದಲ್ಲಿ ಮತ ಪಡೆದು ಅಧಿಕಾರಕ್ಕೇರುವ ಬಿಜೆಪಿ ಬಳಿಕ ಜನರನ್ನು ಮರೆಯುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜನ ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದಾರೆ, ಗ್ಯಾರಂಟಿ ಯೋಜನೆಯನ್ನು ಟೀಕಿಸುತ್ತಲೇ ಬಿಜೆಪಿ ಗರು ಅದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಎಲ್ಲರನ್ನೂ ಸಮಾನ ರೀತಿಯಲ್ಲಿ ಕಾಣುತ್ತದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಸಾಕಷ್ಟು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರಿಕೊಳ್ಳಲಿದ್ದಾರೆ ಎಂದು ಶಾಸಕರು ತಿಳಿಸಿದರು.

ಎದೆಹುಬ್ಬಿಸಿ ನಡೆಯಿರಿ ಸರಕಾರ ನಮ್ಮದೇ: ಎಂ ಬಿ ವಿಶ್ವನಾಥ ರೈ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾಕಿತ್ತು ಎನ್ನುವಷ್ಟರ ಮಟ್ಟಿಗೆ ರಾಜ್ಯದ ಬಿಜೆಪಿ ಅಡಳಿತ ಜನರಿಗೆ ಬೇಡವಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜನ ಸಮಾಧಾನಪಡುವಂತಾಯಿತು, ಪುತ್ತೂರಿನಲ್ಲಿ ನಮ್ಮದೇ ಶಾಸಕರಿದ್ದು ರಾಜ್ಯದಲ್ಲಿ ನಮ್ಮದೇ ಸರಕಾರ ಇದೆ ಇಷ್ಟು ದಿನ ತಲೆಬಾಗಿದ್ದು ಸಾಕು ಇನ್ನು ಎದೆ ಹುಬ್ಬಿಸಿ ನಡೆಯಿರಿ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಹೇಳಿದರು.
ಪುತ್ತೂರು ಶಾಸಕರಾದ ಅಶೋಕ್ ರೈಯವರು ಪುತ್ತೂರಿನಲ್ಲಿ ಉತ್ತಮ ರೀತಿಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಶಾಸಕರ ಕಚೇರಿಗೆ ಬಂದು ಸಾವಿರಾರು ಮಂದಿ ಕೆಲಸ ಮಾಡಿಸಿಕೊಂಡು ಹೋಗುತ್ತಿದ್ದಾರೆ, ಭರವಸೆ ಮಾತ್ರ ನೀಡದೆ ಕೆಲಸ ಮಾಡಿ ತೋರಿಸುವ ತಾಕತ್ತು ನಮ್ಮ ಶಾಸಕರಿಗೆ ಇದೆ ಎಂಬುದು ಜನರಿಗೆ ಗೊತ್ತಾಗಿದೆ, ಮುಂದಿನ ಐದು ವರ್ಷದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪುತ್ತೂರು ಅಭಿವೃದ್ದಿ ಹೊಂದಲಿದೆ ಎಂದು ಹೇಳಿದರು.

ಪುತ್ತೂರಿಗೂ ಐದು ಗ್ಯಾರಂಟಿ : ಹೇಮನಾಥ ಶೆಟ್ಟಿ
ರಾಜ್ಯದಲ್ಲಿ ಕಾಂಗ್ರೆಸ್ ಜನತೆಗೆ ಐದು ಗ್ಯಾರಂಟಿ ಕೊಟ್ಟಿದ್ದರೆ ಪುತ್ತೂರು ಶಾಸಕರು ಕ್ಷೇತ್ರಕ್ಕೆ ಐದು ಗ್ಯಾರಂಟಿಯನ್ನು ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಕಾಯಾಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿಯವರು ಹೇಳಿದರು. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕೆಎಂಎಫ್ ಸ್ಥಳಾಂತರ, ಕೊಯಿಲ ಜಾನುವಾರು ಕೇಂದ್ರದ ಅಭಿವೃದ್ದಿ ಮತ್ತು ಪುತ್ತೂರು ನಗರದಲ್ಲಿ ಸಮಗ್ರ ಅಭಿವೃದ್ದಿ ಈ ಐದು ಗ್ಯಾರಂಟಿಯನ್ನು ಶಾಸಕರು ನೀಡಿದ್ದಾರೆ. ಇವುಗಳ ಪೈಕಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ೯೬೦ ಕೋಟಿ ಬಿಡುಗಡೆಯಾಗಿದೆ, ನಗರದ ಚರಂಡಿ ಕಾಮಗಾರಿಗೂ ೫೦೦ ಕೋಟಿ ಬಿಡುಗಡೆಯಾಗಿದೆ, ಕೆಎಂಎಫ್ ಸ್ಥಳಾಂತರಕ್ಕೆ ಜಾಗ ನಿಗಧಿಪಡಿಸಲಾಗಿದೆ, ಜಾನುವಾರು ಕೆಂದ್ರಕ್ಕೂ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದ ಅವರು ಈ ಐದು ಗ್ಯಾರಂಟಿಗಳು ಜಾರಿಯಾದ ಬಳಿಕ ಪುತ್ತೂರಿನ ಚಿತ್ರಣವೇ ಬದಲಾಗಲಿದೆ. ಇಲ್ಲಿನ ಸಾವಿರಾರು ಯುವಕರಿಗೆ ಉದ್ಯೋಗ ದೊರೆಯಲಿದೆ, ಜನರ ಓಡಾಟ ಹೆಚ್ಚಾಗಿ ಪುತ್ತೂರಿನಲ್ಲಿ ವ್ಯಾಪಾರ, ವ್ಯವಹಾರ ಜಾಸ್ತಿಯಗಲಿದ್ದು ಒಟ್ಟಿನಲ್ಲಿ ಮುಂದೆ ಪುತ್ತೂರು ಜನತೆಗೆ ನೆಮ್ಮದಿಯ ದಿನಗಳು ಖಂಡಿತವಾಗಿಯೂ ಬರುತ್ತದೆ ಎಂದು ಹೇಳಿದರು.

ಶಾಸಕರಿಗೆ ಗಟ್ಸ್ ಇದೆ ಎಂಬುದು ಜನತೆಗೆ ಗೊತ್ತಾಗಿದೆ: ಬಡಗನ್ನೂರು
ಅಕ್ರಮಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಮಾತನಾಡಿ ಶಾಸಕ ಅಶೋಕ್ ರೈ ಯವರಿಗೆ ಗಟ್ಸ್ ಇದೆ ಎಂಬುದು ಜನರಿಗೆ ಗೊತ್ತಾಗಿದೆ ಈ ಕಾರಣಕ್ಕೆ ಅವರು ಹೋದಲ್ಲೆಲ್ಲಾ ಜನ ಸುತ್ತುವರಿಯುತ್ತಾರೆ ಎಂದು ಹೇಳಿದರು. ನುಡಿದಂತೆ ನಡೆಯುವ ಮೂಲಕ ಶಾಸಕರು ಜನ ಮೆಚ್ಚುಗೆ ಗಳಿಸಿದ್ದಾರೆ.ಬಡವರ ಪರ ಅಪಾರ ಕಾಳಜಿ ಇರುವ ಶಾಸಕ ರೈಗಳ ಬಳಿ ನಿತ್ಯವೂ ನೂರಾರು ಸಮಸ್ಯೆಗಳನ್ನು ಹೊತ್ತ ಬಡವರು ಭೇಟಿಯಗಿ ಸಮಸ್ಯೆ ಇತ್ಯರ್ಥಮಾಡಿಕೊಳ್ಳುತ್ತಿದ್ದಾರೆ , ಈ ಹಿಂದೆ ಈ ಪರಿಪಾಟ ಇರಲಿಲ್ಲ ಶಾಸಕರು ಏನೆಲ್ಲಾ ಮಾಡಬಹುದು ಎಂಬುದನ್ನು ಅಶೋಕ್ ರೈ ತೋರಿಸಿಕೊಟ್ಟಿದ್ದಾರೆ. ಜನರ ಪರ ಕೆಲಸ ಮಾಡಲು ಶಾಸಕರಾದವರಿಗೆ ಗಟ್ಸ್ ಬೇಕು ಎಂಬುದು ಜನ ಮಾತನಾಡತೊಡಗಿದ್ದಾರೆ ಎಂದು ಬಡಗನ್ನೂರುರವರು ಹೇಳಿದರು. ಭೃಷ್ಟಾಚಾರ ಮುಕ್ತ ಪುತ್ತೂರನ್ನಾಗಿ ಮಾಡುವಲ್ಲಿ ಅವರ ಶ್ರಮ ಸಫಲವಾಗಲಿದೆ ಎಂದು ಹೇಳಿದರು.

ಕಾಂಗ್ರೆಸ್ಸನ್ನು ಮರೆಯದಿರಿ: ಅಮಲರಾಮಚಂದ್ರ
ಕಳೆದ ಮೂರು ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಜನತೆಗೆ ನೆಮ್ಮದಿಯ ಜೀವನವನ್ನು ನೀಡಿದೆ, ಎಲ್ಲರ ಖಾತೆಗೂ ಹಣ ಬಂದಿದೆ, ನಾವು ಸುಳ್ಳು ಹೇಳಿ ಮೋಸ ಮಾಡುವವರಲ್ಲ ನಮ್ಮದೇನಿದ್ದರೂ ನುಡಿದಂತೆ ನಡೆಯುವ ಜಾಯಾಮಾನವಾಗಿದ್ದು ನೆಮ್ಮದಿಯ ಬದುಕು ನೀಡಿದ ಕಾಂಗ್ರೆಸ್ಸನ್ನು ಯಾರೂ ಮರೆಯಬಾರದು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತದಾನ ಮಾಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಅಮಲರಾಮಚಂದ್ರ ಮನವಿ ಮಾಡಿದರು. ಕೊಳ್ತಿಗೆಯಲ್ಲಿ ಕಾಂಗ್ರೆಸ್ ಭದ್ರವಾಗಿದೆ. ಕೊಳ್ತಿಗೆಯ ಬಿಜೆಪಿಗರು ಇಲ್ಲಿನ ತಮಿಳು ನಿವಾಸಿಗಳಿಗೆ ತೊಂದರೆ ನೀಡಿದ್ದಾರೆ, ಅವರು ಮನೆ ನಿರ್ಮಾಣ ಮಾಡಲು ಸರಕಾರ ಜಾಗ ಕೊಟ್ಟರೂ ಅಲ್ಲಿ ಮನೆ ನಿರ್ಮಾಣ ಮಾಡಲು ಬಿಜೆಪಿ ಅಡ್ಡಿಪಡಿಸಿತ್ತು, ಶಾಸಕರಾದ ಅಶೋಕ್ ರೈ ಆ ಕುಟುಂಬಗಳಿಗೆ ನ್ಯಾಯ ಒದಗಿಸಿದ್ದಾರೆ ಎಂದು ಹೇಳಿದರು.

ಹೇಮನಾಥ ಶೆಟ್ಟಿ ಅರಣ್ಯ ನಿಗಮ ಕೊಡಿ
ಸಭೆಯಲ್ಲಿ ಮಾತನಾಡಿದ ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷರಾದ ಕೆ ಎಸ್ ಪ್ರಮೋದ್‌ರವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕಾವು ಹೇಮನಾಥ ಶೆಟ್ಟಿಯವರು ಪಕ್ಷಕ್ಕಾಗಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿದವರು ಅವರಿಗೆ ಸರಕಾರ ಉನ್ನತ ಹುದ್ದೆಯನ್ನು ನೀಡಬೇಕು. ಅರಣ್ಯ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಬೇಕು ಎಂದು ಸಭೆಯಲ್ಲಿ ಹೇಳಿದಾಗ ಸಭೆಯಲ್ಲಿದ್ದ ಕಾರ್ಯಕರ್ತರು ಒಕ್ಕೊರಳನಿಂದ ಅನುಮೋದನೆ ಮಾಡಿದರು.
ಶಾಸಕರು ಈ ವಿಚಾರವನ್ನು ಸರಕಾರದ ಗಮನಕ್ಕೆ ತರಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಹೇಮನಾಥ ಶೆಟ್ಟಿಯವರು ಹಿರಿಯರು ಅವರನ್ನು ಬಿಟ್ಟು ಹಾಕುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ವೇದಿಕೆಯಲ್ಲಿ ವಲಯಾಧ್ಯಕ್ಷರಾದ ವೆಂಕಟ್ರಮಣ ಗೌಡ, ಮಾಜಿ ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲರಾಮಚಂದ್ರ, ಪ್ರದೀಪ್‌ಕುಮಾರ್ ಪಾಂಬಾರು, ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಧರ್ ಪೂಜಾರಿ , ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರಾದ ಮುರಳೀದರ ಎಸ್ ಪಿ, ಗ್ರಾಪಂ ಸದಸ್ಯರುಗಳಖಾದ ಪವನ್ ಡಿ ಜಿ, ಕೊಳ್ತಿಗೆ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ವಸಂತಕುಮಾರ ರೈ ದುಗ್ಗಳ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶಾರದಾ, ಉಪಾಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಸಾಮಾಜಿಕ ಜಾಲತಾಣದ ಸಿದ್ದಿಕ್ ಸುಲ್ತಾನ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್ ಪಾಣಜೆ, ಗ್ರಾಪಂ ಅಧ್ಯಕ್ಷರಾದ ಅಕ್ಕಮ್ಮ, ಕೊಳ್ತಿಗೆ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷೆ ಲಕ್ಷ್ಮಿ ಕೆ ಜಿ
ಗ್ರಾಪಂ ಸದಸ್ಯರು, ಸಹಕಾರಿ ಸಂಘದ ನಿರ್ದೇಶಕರು, ಹಾಲು ಉತ್ಪಾದಕರ ಸಂಘದ ನಿರ್ದೇಶಕರು, ಕಾಂಗ್ರೆಸ್ ಕಾರ್ಯಕರ್ತರು, ಊರವರು, ಅಭಿಮಾನಿಗಳು ಭಾಗಿಯಾಗಿದ್ದರು.

ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷರಾದ ಪ್ರಮೋದ್ ಕೆ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಸಭೆಯಲ್ಲಿ ಶಾಸಕರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ವಿನೋದ್ ರೈ ಕೆಳಗಿನ ಮನೆ ಕಾರ್ಯಕ್ರಮ ನಿರೂಪಿಸಿದರು.


Share with

Leave a Reply

Your email address will not be published. Required fields are marked *