ಉಡುಪಿ: ಪಾದಚಾರಿಯೊಬ್ಬರಿಗೆ ಕಂಟೈನರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಸಂತೆಕಟ್ಟೆಯಲ್ಲಿ ನಡೆದಿದೆ.
ಮೃತರನ್ನು ಸಂಜೀವ (61) ಎಂದು ಗುರುತಿಸಲಾಗಿದ್ದು ಪುತ್ತೂರು ಗ್ರಾಮದ ಸಂತೆಕಟ್ಟೆ ಕ್ಲಾಸಿಕ್ ಸರ್ವಿಸ್ ಸೆಂಟರ್ ಬಳಿ ಹಾದು ಹೋಗುವ ಕರಾವಳಿ-ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ-66 ರ ಪಕ್ಕದ ರಸ್ತೆಯಲ್ಲಿ ಸಂಜೀವ ಅವರು ನ.1 ರಂದು ಬೆಳಗ್ಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ಉಡುಪಿ ಕಡೆಯಿಂದ ಸಂತೆಕಟ್ಟೆ ಕಡೆಗೆ ಹೋಗುತ್ತಿದ್ದ ಕಂಟೈನರ್ ವಾಹನವು ರಸ್ತೆಯ ಎಡಭಾಗದಲ್ಲಿ ಬಂದು ಚಾಲಕ ಪ್ರಮೋದ್ ರವರ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಪಲ್ಟಿಯಾಗಿದೆ. ಇದರಿಂದ ಲಾರಿಯ ಕಂಟೈನರ್ ಬಾಕ್ಸ್ ವಾಹನದಿಂದ ಬೇರ್ಪಟ್ಟು ಲಾರಿ ನಿಯಂತ್ರಣ ತಪ್ಪಿ ಸಂಜೀವ ಅವರಿಗೆ ಡಿಕ್ಕಿ ಹೊಡೆದಿದ್ದು ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.