ಬಿಜೆಪಿ – ಪುತ್ತಿಲ ನಡುವೆ ಮುಂದುವರೆದ ಮುನಿಸು..!

Share with

ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದ ಬಿಜೆಪಿಯೊಳಗಿನ ಎರಡು ತಂಡಗಳ ನಡುವಿನ ತಿಕ್ಕಾಟ ಮತ್ತೆ ಮುನ್ನೆಲೆಗೆ ಬಂದಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರು ಭಾಗಿಯಾಗಿದ್ದ ಜಿಲ್ಲಾ ಮಟ್ಟದ ಅಟಲ್ ವಿರಾಸತ್ ಕಾರ್ಯಕ್ರಮದಲ್ಲಿ ಅರುಣ್‌ ಕುಮಾರ್‌ಪುತ್ತಿಲ ಸಹಿತ ಪುತ್ತಿಲ ಪರಿವಾರದ ಪ್ರಮುಖರು ಗೈರಾಗಿದ್ದು ಇದರಿಂದ ಮುನಿಸು ತಣಿದಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ಸ್ವತಃ ರಾಜ್ಯಾಧ್ಯಕ್ಷರೇ ಭಾಗವಹಿಸಿದ ಅಟಲ್ ವಿರಾಸತ್ ಕಾರ್ಯಕ್ರಮದಲ್ಲಿ ಅರುಣ್ ಕುಮಾರ್‌ಪುತ್ತಿಲ ಸಹಿತ ಪುತ್ತಿಲ ಪರಿವಾರದ ಮುಖಂಡರು ಗೈರಾಗಿ ತಮ್ಮ ಅಸಮಾಧನವನ್ನು ವ್ಯಕ್ತಪಡಿಸಿದ್ದು ಚರ್ಚೆಗೆ ಈಡಾಗಿದೆ.

ಸಂಪರ್ಕಿಸಿಲ್ಲ..!

ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿಯು ಪ್ರಚಾರ ಸಭೆಗಳಲ್ಲಿ ಕಾಣಿಸಿಕೊಂಡಿದ್ದ ಅರುಣ್ ಪುತ್ತಿಲ ಅವರು ವಿಜಯೇಂದ್ರ ಅವರ ನಿಕಟ ಸಂಪರ್ಕದಲ್ಲಿದ್ದರು. ಹೀಗಾಗಿ ಪುತ್ತೂರಿಗೆ ರಾಜ್ಯಾಧ್ಯಕ್ಷರು ಭೇಟಿ ನೀಡುವ ಸಂದರ್ಭದಲ್ಲಿ ಅರುಣ್ ಪುತ್ತಿಲ ಅವರ ಜತೆ ಮಾತುಕತೆ ನಡೆಸುವ ಸಾಧ್ಯತೆ ಇತ್ತು ಎನ್ನಲಾಗಿತ್ತು. ಆದರೆ ಯಾವುದೇ ಮಾತುಕತೆ ನಡೆದಿಲ್ಲ ಎನ್ನುವ ಮಾಹಿತಿ ಪುತ್ತಿಲ ಪರಿವಾರದ ಮುಖಂಡರಿಂದ ದೊರೆತಿದೆ.

ಪ್ರತಿಕ್ರಿಯೆಗೆ ನಿರಾಕರಣ

ಪುತ್ತಿಲ ಗೈರಿನ ಬಗ್ಗೆಮಾಧ್ಯಮದವರು ಪ್ರಶ್ನಿಸಿದರೂ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು.

ಆಹ್ವಾನ ಇರಲಿಲ್ಲ

ಅಟಲ್ ವಿರಾಸತ್ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿಲ್ಲ. ಹಾಗಾಗಿ ಹೋಗಿಲ್ಲ. ಈ ಹಿಂದೆ ವಿಹಿಂಪ ಕಟ್ಟಡ ಶಿಲಾನ್ಯಾಸದ ಸಂದರ್ಭದಲ್ಲಿ ಉಂಟಾದ ಗೊಂದಲ ಇಲ್ಲಿಯೂ ಆಗಬಾರದು ಎನ್ನುವ ಕಾರಣದಿಂದ ದೂರ ಉಳಿದಿದ್ದೇವೆ. ನಾವು ಆರು ತಿಂಗಳ ಹಿಂದೆಯೇ ವಾಜಪೇಯಿ ಅವರ ಹೆಸರಿನಲ್ಲಿ ಮನೆ ನಿರ್ಮಾಣ ಮಾಡುವ ಮೂಲಕ ಅವರನ್ನು ಸ್ಮರಿಸಿದ್ದೇವೆ. ಅದಲ್ಲದೆ ನನ್ನನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವ ಸಂದರ್ಭದಲ್ಲಿ ನೀಡಿದ ಭರವಸೆ ಇನ್ನೂ ಈಡೇರಿಲ್ಲ. ಅದಾಗ್ಯೂ ಹಿರಿಯರು ಕೊಟ್ಟ ಮಾತನ್ನು ತಪ್ಪಲಾರರು ಎನ್ನುವ ವಿಶ್ವಾಸ ಇದೆ –ಅರುಣ್ ಕುಮಾರ್ ಪುತ್ತಿಲ

ಪುತ್ತೂರಿನಲ್ಲಿ ಪಕ್ಷವನ್ನು ಗಟ್ಟಿಯಾಗಿ ಕಟ್ಟಬೇಕು ಅನ್ನುವುದು ನಮ್ಮೆಲ್ಲರ ಉದ್ದೇಶ. ಸಣ್ಣ ಪುಟ್ಟ ಗೊಂದಲ ಇರುವುದು ನಿಜ. ಪಕ್ಷದ ವರಿಷ್ಠರು ಅದನ್ನು ಸರಿ ಮಾಡುವ ವಿಶ್ವಾಸ ಇದೆ – ದಯಾನಂದ ಶೆಟ್ಟಿ ಅಧ್ಯಕ್ಷ, ಬಿಜೆಪಿ ಗ್ರಾಮಾಂತರ ಮಂಡಲ ಸಮಿತಿ


Share with

Leave a Reply

Your email address will not be published. Required fields are marked *