ಉಡುಪಿ: ಆಗಸ್ಟ್ ತಿಂಗಳಲ್ಲಿ ಆಗುಂಬೆಯಲ್ಲಿ ನಡೆದ ಅನೈತಿಕ ಪೊಲೀಸ್ ಗಿರಿಯ ವಿಡಿಯೋ ಇದೀಗ ವೈರಲ್ ಆಗಿದ್ದು, ಈ ಸಂಬಂಧ ಯುವತಿಯ ಸಹೋದರ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾನೆ.
ಕಾಪು ಪೊಲೀಸ್ ಠಾಣೆ ವ್ಯಾಪ್ತಿಯ ಕಾಲೇಜಿನ ವಿದ್ಯಾರ್ಥಿಗಳಿಬ್ಬರು ಒಂದು ತಿಂಗಳ ಹಿಂದೆ ಬೈಕ್ ನಲ್ಲಿ ಆಗುಂಬೆಯ ಫಾಲ್ಸ್ ಗೆ ತೆರಳಿದ್ದು, ಅಲ್ಲಿಂದ ವಾಪಾಸ್ ಬರುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಬೈಕ್ ಅನ್ನು ತಡೆದ ಸ್ಥಳೀಯ ಸಂಘ ಪರಿವಾರದ ಕಾರ್ಯಕರ್ತರು ವಿಚಾರಣೆ ನಡೆಸಿದ್ದು, ಈ ವೇಳೆ ಸಂಘ ಪರಿವಾರದ ಕಾರ್ಯಕರ್ತರು ವಿದ್ಯಾರ್ಥಿ, ವಿದ್ಯಾರ್ಥಿನಿಯ ವಿಡಿಯೋವನ್ನು ತಮ್ಮ ಮೊಬೈಲ್ ಗಳಲ್ಲಿ ಚಿತ್ರೀಕರಣ ಮಾಡಿದ್ದು, ಇದೀಗ ಈ ವಿಡಿಯೋವನ್ನು ತಿಂಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ಸಾಕಷ್ಟು ವೈರಲ್ ಆಗುತ್ತಿದೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಸಹೋದರ ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಎಸ್ಪಿ ಅವರು ತಿಳಿಸಿದ್ದಾರೆ.