ಉಪ್ಪಳ: ಪ್ರತಾಪನಗರದ ಸೋಂಕಾಲಿನಲ್ಲಿ ಪೈಪ್ ಬಿರುಕು ಬಿಟ್ಟು ವ್ಯಾಪಕ ಕುಡಿನೀರು ಪೋಲಾಗುತ್ತಿದ್ದರೂ ದುರಸ್ಥಿಗೆ ಕ್ರಮಕೈಗೊಳ್ಳದಿರುವುದರಿಂದ ಮುಂದೆ ನೀರಿನ ಕ್ಷಾಮ ತಲೆದೋರಲಿದೆ ಎಂದು ಊರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಸೋಂಕಾಲಿನಲ್ಲಿ ಹಲವಾರು ದಿನಗಳಿಂದ ಪೈಪ್ ಬಿರುಕುಬಿಟ್ಟಿದ್ದು, ಇದರಿಂದ ನೀರು ಪೋಲಾಗಿ ರಸ್ತೆ ಉದ್ದಕ್ಕೂ ಹರಿದು ಮಣ್ಣಿನ ರಸ್ತೆ ಕೆಸರು ಗದ್ದೆಯಾಗಿ ವಾಹನ ಸಂಚಾರ ಸಹಿತ ನಡೆದದಾಡಲು ತೀರಾ ಸಮಸ್ಯೆಯಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟವರ ಗಮನ ಹರಿಸಿದರೂ ದುರಸ್ಥಿಗೆ ಕ್ರಮಕೈಗೊಳ್ಳದಿರುವುದು ಸ್ಥಳೀಯರಲ್ಲಿ ಸಮಸ್ಯೆಗೆ ಕಾರಣವಾಗಿದೆ.
ಡಿಸೆಂಬರ್ ತಿಂಗಳಲ್ಲಿ ಇದೇ ಪರಿಸರದ ಬಸ್ ನಿಲ್ದಾಣ ಬಳಿಯಲ್ಲಿ ವ್ಯಾಪಕ ನೀರು ಪೋಲಾಗುತ್ತಿದ್ದು, ಊರವರ ನಿರಂತರ ಒತ್ತಾಯದಿಂದ ದುರಸ್ಥಿಗೊಳಿಸಲಾಗಿದೆ. ಇದೀಗ ಇನ್ನೊಂದು ಕಡೆ ನೀರು ಪೋಲಾಗುವುದು ಮತ್ತೆ ಸಮಸ್ಯೆಯಾಗಿದೆ. ಪದೇ ಪದೇ ವ್ಯಾಪಕ ನೀರು ಪೋಲಾದಲ್ಲಿ ಮುಂದೆ ನೀರಿನ ಕ್ಷಾಮ ಹೆಚ್ಚಾಗಲಿರುವುದಾಗಿ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೀರಾವರಿ ಇಲಾಖೆ ಅಧಿಕಾರಿಗಳು ಮುತುವರ್ಜಿವಹಿಸಿ ಅಲ್ಲಲ್ಲಿ ಬಿರುಕು ಬಿಟ್ಟು ನೀರು ಪೋಲಾಗುತ್ತಿರುವ ಬಗ್ಗೆ ತಪಾಸಣೆ ನಡೆಸಿ ಕೂಡಲೇ ದುರಸ್ಥಿಗೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.




