ಮಧ್ಯಪ್ರದೇಶದಲ್ಲಿ(Madhya Pradesh) ಕೆಮ್ಮಿನ ಸಿರಪ್ (Cough Syrup Deaths) 11 ಮಕ್ಕಳನ್ನು ಬಲಿ ಪಡೆದಿದೆ. ಈ ಕೆಮ್ಮಿನ ಸಿರಪ್ ಪ್ರಕರಣದಲ್ಲಿ ಭಾಗಿಯಾಗಿರುವ ವೈದ್ಯ ಡಾ. ಪ್ರವೀಣ್ ಸೋನಿ ಎಂಬವರನ್ನು ಈಗಾಗಲೇ ಬಂಧಿಸಲಾಗಿದೆ. ಈ ಬಂಧನದ ಬಳಿಕ ಔಷಧೀಯ ಕಂಪನಿಗೆ ಕ್ಲೀನ್ ಚಿಟ್ ನೀಡುವ ಸರ್ಕಾರದ ನಿರ್ಧಾರವನ್ನು ವೈದ್ಯಕೀಯ ಸಂಸ್ಥೆಯೂ ಪ್ರಶ್ನೆ ಮಾಡಿದೆ. ಹೌದು, ಭಾರತೀಯ ವೈದ್ಯಕೀಯ ಸಂಘ (IMA) ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ಮಾತುಕತೆ ನಡೆಸುವುದಾಗಿ ಘೋಷಿಸಿದೆ ಎಂದು ಮೂಲವೊಂದು ಇಂಡಿಯಾ ಟುಡೇಗೆ ತಿಳಿಸಿದೆ.
ಡಾ. ಪ್ರವೀಣ್ ಸೋನಿ ಬಂಧನಕ್ಕೆ ಭಾರತೀಯ ವೈದ್ಯಕೀಯ ಸಂಘ ಆಕ್ಷೇಪ ವ್ಯಕ್ತಪಡಿಸಿದ್ದು, ವೈದ್ಯರ ಮೇಲೆ ಆರೋಪ ಹೊರಿಸಬಾರದು ಹಾಗೂ ಚಿಕಿತ್ಸಾ ಶಿಷ್ಟಾಚಾರಗಳನ್ನು ಅನುಸರಿಸಲಾಗಿದೆ ಎಂದು ತಿಳಿಸಿದೆ. ಡಾ. ಸೋನಿಯ ಬಿಡುಗಡೆಗೆ ಒತ್ತಾಯಿಸಲು ಸಂಘವು ದೃಢನಿಶ್ಚಯ ಹೊಂದಿದೆ. ಈಗಾಗಲೇ ಸತ್ಯಶೋಧನಾ ತಂಡವನ್ನು ಚಿಂದ್ವಾರಕ್ಕೆ ಕಳುಹಿಸಲಾಗಿದ್ದು, ಸ್ಥಳೀಯ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ನಿರ್ಣಯಿಸಲು ಮುಂದಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಅಕ್ರಮ ಸಿರಪ್ ವಿತರಣೆ: ಪ್ರವೀಣ್ ಸೋನಿ ಬಂಧನ
ಕೆಮ್ಮಿನ ಸಿರಪ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎಸ್ಪಿ ನೇತೃತ್ವದ ವಿಶೇಷ ತಂಡದಿಂದ ಪರಾಸಿಯಾ ಸಿವಿಲ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಪ್ರವೀಣ್ ಸೋನಿ ಎಂಬವರನ್ನು ಬಂಧಿಸಿದ್ದಾರೆ. ಶ್ರೀಸನ್ ಫಾರ್ಮಾಸ್ಯುಟಿಕಲ್ಸ್ ಮತ್ತು ಡಾ. ಸೋನಿ ಅಕ್ರಮವಾಗಿ ಸಿರಪ್ ವಿತರಿಸಿದ್ದಾರೆ ಎನ್ನಲಾಗಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 276, 105 ಮತ್ತು ಔಷಧಗಳು ಮತ್ತು ಸೌಂದರ್ಯವರ್ಧಕ ಕಾಯ್ದೆಯ 27A ಅಡಿಯಲ್ಲಿ ರಾಜ್ಪಾಲ್ ಚೌಕ್ನ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು, ಔಷಧ ಕಂಪನಿ ಮತ್ತು ಡಾ. ಪ್ರವೀಣ್ ಸೋನಿ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.




