ಬೆಳ್ತಂಗಡಿ: ಬಜಿರೆ ಗ್ರಾಮದ ಬಡಾರು ಕೊರಗಲ್ಲುವಿನಲ್ಲಿರುವ ಕೊರಗಜ್ಜನ ಕಟ್ಟೆಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿ ಕೌಂಟರ್ ಕೇಸ್ ದಾಖಲಾಗಿದೆ. ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿ ದಾಖಲಾಗಿದ್ದ ಪ್ರಥಮ ಎಫ್‌ಐಆರ್‌ನಲ್ಲಿ ಐವರ ವಿರುದ್ಧ ಕೇಸು ದಾಖಲಿಸಿಕೊಂಡು ಓರ್ವನನ್ನು ಬಂಧಿಸಲಾಗಿದ್ದರೆ ಮತ್ತೊಂದು ಎಫ್‌ಐಆರ್‌ನಲ್ಲಿ 13 ಮಂದಿಯ ವಿರುದ್ಧ ಕೇಸು ದಾಖಲು ಮಾಡಲಾಗಿದೆ. ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ವೇಣೂರು ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಸೌಮ್ಯರವರು ತನಿಖೆ ನಡೆಸುತ್ತಿದ್ದಾರೆ.
ಕೌಂಟರ್ ಕೇಸ್ ದಾಖಲು:
ಬಜಿರೆ ಗ್ರಾಮದ ಬಡಾರು ಕೊರಗಲ್ಲುವಿನಲ್ಲಿರುವ ಸ್ವಾಮಿ ಕೊರಗಜ್ಜನ ಕಟ್ಟೆಗೆ ಬೆಂಕಿ ಹಚ್ಚಿದ ಘಟನೆ ಜುಲೈ 11ರಂದು ಬೆಳಿಗ್ಗೆ 10.30ರ ವೇಳೆಗೆ ನಡೆದಿತ್ತು. ಈ ಕುರಿತು ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ನ ಅಧ್ಯಕ್ಷ ಪ್ರದೀಪ್ ಕುಮಾರ್ ಹೆಗ್ಡೆ ನೀಡಿದ್ದ ದೂರಿನಂತೆ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಬಜಿರೆ ಗ್ರಾಮದ ಬಡಾರು ನಿವಾಸಿಗಳಾದ ಹರೀಶ್ ಪೂಜಾರಿ, ಡಾ.ರಾಜೇಶ್, ರಮೇಶ್ ಕುಡ್ಮೇರು, ಓಂಪ್ರಕಾಶ್ ಮತ್ತು ಪ್ರಶಾಂತ್ ಬಂಟ್ವಾಳ್ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಕಲಂ 436, 109, 295(ಎ) ಜೊತೆಗೆ 34 ಐಪಿಸಿಯಡಿ ಕೇಸು ದಾಖಲಿಸಿಕೊಳ್ಳಲಾಗಿತ್ತು. ಬಳಿಕ ಪ್ರಮುಖ ಆರೋಪಿ ಹರೀಶ್ ಪೂಜಾರಿಯನ್ನು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಘಟನೆಯಿಂದಾಗಿ ಉದ್ವಿಗ್ನಗೊಂಡಿದ್ದ ಪರಿಸರವನ್ನು ಪುತ್ತೂರು ಡಿವೈಎಸ್‌ಪಿಯಾಗಿದ್ದು ಬಂಟ್ವಾಳ ಡಿವೈಎಸ್‌ಪಿಯಾಗಿ ಪ್ರಭಾರ ಕರ್ತವ್ಯದಲ್ಲಿದ್ದ ಡಾ.ಗಾನಾ ಪಿ. ಕುಮಾರ್ ಮತ್ತು ಎಸ್‌ಐ ಸೌಮ್ಯ ನೇತೃತ್ವದಲ್ಲಿ ಹತೋಟಿಗೆ ತರಲಾಗಿತ್ತು. ಬಳಿಕ ಬೆಳ್ತಂಗಡಿ ತಹಶೀಲ್ದಾರ್ ಸುರೇಶ್ ಕುಮಾರ್ ಅವರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರಲ್ಲದೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಘಟನೆ ನಡೆದ ಆಸುಪಾಸಿಗೆ ಯಾರೂ ತೆರಳದಂತೆ ನಿಷೇಧಾಜ್ಞೆ ವಿಧಿಸಿದ್ದರು. ಇದೀಗ ಮತ್ತೊಂದು ಬೆಳವಣಿಗೆಯಲ್ಲಿ ಕೊರಗಲ್ಲು ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ನ ಮ್ಯಾನೆಜಿಂಗ್ ಟ್ರಸ್ಟಿ ಡಾ.ರಾಜೇಶ್ ಬರ್ದಿಲರವರು ನೀಡಿದ ಪ್ರತಿ ದೂರಿನಂತೆ ಧಾರ್ಮಿಕ ನಿಂದನೆ, ಜೀವ ಬೆದರಿಕೆ, ಮೋಸ ಎಸಗಿದ ಆರೋಪದಡಿ ಪ್ರದೀಪ್ ಕುಮಾರ್ ಹೆಗ್ಡೆ, ಉಮೇಶ್ ಪೂಜಾರಿ, ಸಂದೀಪ್ ಕುಮಾರ್ ಹೆಗ್ಡೆ, ಪ್ರಸಾದ್, ದಿನೇಶ್ ಪೂಜಾರಿ, ವಿಜಯಶೇಖರ, ಮಹಾನಂದ ಪೂಜಾರಿ, ಹರಿಪ್ರಸಾದ್, ಮನು ಗೌಡ, ಶ್ರೀಧರ ಪೂಜಾರಿ, ವಸಂತಿ ಪೂಜಾರ್ತಿ, ದಯಾನಂದ ಪೂಜಾರಿ ಮತ್ತು ಹರೀಶ್ ಪೂಜಾರಿ ಎಂಬವರ ವಿರುದ್ಧ ಐಪಿಸಿ 295 ಎಮ 420, 436,506,109,34ರಂತೆ ಕೇಸು ದಾಖಲಿಸಲಾಗಿದೆ. ತನಿಖಾಧಿಕಾರಿಯಾಗಿರುವ ಎಸ್‌ಐ ಸೌಮ್ಯರವರು ತನಿಖೆ ಮುಂದುವರಿಸಿದ್ದಾರೆ.