ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾ.ಪಂ. ವ್ಯಾಪ್ತಿಯ ತುಂಡು ಪದವು ಎಂಬಲ್ಲಿ ಬೆಂಕಿ ಅವಘಡಕ್ಕೆ ಸಿಲುಕಿ ದಂಪತಿ ಮೃತಪಟ್ಟಿದ್ದಾರೆ.
ಹೊರದೇಶದಲ್ಲಿ ಕೆಲಸದಲ್ಲಿದ್ದು ಊರಿನಲ್ಲಿ ನಿವೃತ್ತ ಜೀವನ ಸಾಗಿಸುತ್ತಿರುವ ಗಿಲ್ಬರ್ಟ್ ಕಾರ್ಲೊ (78) ಮತ್ತು ಅವರ ಪತ್ನಿ ಕ್ರಿಸ್ಟಿನಾ ಕಾರ್ಲೊ (70) ಸಾವನ್ನಪ್ಪಿದ ದಂಪತಿ.
ಕಳೆದ ಒಂದೂವರೆ ವರ್ಷಗಳ ಹಿಂದೆ ಅವರ ದಾಂಪತ್ಯ ಜೀವನದ ಸುವರ್ಣ ಸಂಭ್ರಮಾಚರಣೆ ನಡೆದಿತ್ತು. ಇವರಿಗೆ ಮೂವರು ಮಕ್ಕಳಿದ್ದು ಎಲ್ಲರೂ ಹೆಣ್ಣುಮಕ್ಕಳು. ಇವರಲ್ಲಿ ಇಬ್ಬರು ಹೊರದೇಶದಲ್ಲಿ ವಾಸಿಸುತ್ತಿದ್ದರೆ, ಒಬ್ಬರು ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
ಜ.28ರಂದು ತುಂಡುಪದವು ಬಳಿಯ ಗುಡ್ಡದ ಸುತ್ತಲೂ ಬೆಂಕಿ ಕಾಣಿಸಿಕೊಂಡದ್ದನ್ನು ನೋಡಿ ಸುತ್ತಮುತ್ತಲಿವರು ಅದನ್ನು ನಂದಿಸುವ ಹೊತ್ತಿನಲ್ಲಿ ಇಬ್ಬರ ಶವ ಕಂಡುಬಂದಿದೆ. ಕೂಡಲೇ ಗಾಬರಿಗೊಂಡ ಸ್ಥಳೀಯರು ಅಗ್ನಿಶಾಮಕ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಸೇರಿ ಬೆಂಕಿ ನಂದಿಸಿದ್ದಾರೆ. ಪೊಲೀಸರು ಆಗಮಿಸಿ ಮಹಜರು ನಡೆಸಿದ್ದಾರೆ.
ಗಿಲ್ಬರ್ಟ್ ದಂಪತಿ ಸುತ್ತಮುತ್ತ ಇದ್ದ ಕಸಕಡ್ಡಿಗಳಿಗೆ ಬೆಂಕಿ ಹಚ್ಚಿರಬೇಕು ಅಥವಾ ಬೆಂಕಿ ಗಾಳಿಗೆ ಇವರ ಮನೆ ಪಕ್ಕದ ಗುಡ್ಡೆಯಲ್ಲಿ ವ್ಯಾಪಿಸಿರಬೇಕು, ಈ ಸಂದರ್ಭ ದಂಪತಿ ಅದನ್ನು ನಂದಿಸಲೆಂದು ತೆರಳಿದಾಗ ಇಬ್ಬರೂ ಅಗ್ನಿಯ ತೆಕ್ಕೆಗೆ ಸಿಲುಕಿಕೊಂಡಿರಬಹುದು. ಇಬ್ಬರೂ ವಯೋವೃದ್ಧರಾದ ಕಾರಣ ಅದರಿಂದ ಹೊರಬರಲಾಗದೆ ಅಲ್ಲೇ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.