ಬೆಂಗಳೂರು: ಮದ್ಯದ ಅಮಲಿನಲ್ಲಿ ದಂಪತಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮುಂದೆ ರಂಪಾಟ ಸೃಷ್ಟಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಘಟನೆ ಕಳೆದ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಜ.5 ರಂದು ಸಂಜೆ 5 ಗಂಟೆಗೆ ಬಾಳೆಕುಂದ್ರಿ ಸರ್ಕಲ್‌ನಲ್ಲಿ ಮದ್ಯದ ಅಮಲಿನಲ್ಲಿದ್ದ ದಂಪತಿ ಬೈಕ್‌ನಿಂದ ಬಿದಿದ್ದರು. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಇಬ್ಬರನ್ನೂ ಕಬ್ಬನ್‌ಪಾರ್ಕ್ ಸಂಚಾರ ಪೊಲೀಸ್ ಠಾಣೆಯ ಬಳಿ ಕರೆತಂದಿದ್ದರು. ಆದರೆ, ಠಾಣೆಯ ಒಳಗೆ ಬರಲು ನಿರಾಕರಿಸಿದ ಮಹಿಳೆ, ಮುಂಬಾಗಿಲಲ್ಲೇ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದರು. ಕುಡಿದ ಮತ್ತಿನಲ್ಲಿ ನಿನ್ನಿಂದಲೇ ಇದೆಲ್ಲಾ ಆಗಿದ್ದು ಎಂದು ಪತಿಯೊಂದಿಗೆ ಜಗಳವಾಡಿ ಆತನಿಗೆ ಕಾಲಿನಿಂದ ಒದ್ದು ‘ಇವನು ಗಾಂಜಾ ಪೆಡ್ಲರ್’ ಎಂದು ಸಾರ್ವಜನಿಕವಾಗಿ ಕೂಗಾಡಿದ್ದರು.
ದಂಪತಿ ಶಿವಾಜಿನಗರ ನಿವಾಸಿಗಳಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿ ವಿಚಿತ್ರವಾಗಿ ವರ್ತಿಸಿದ್ದಾರೆ. ಸದ್ಯ ದಂಪತಿ ವಿರುದ್ಧ ‘ಡ್ರಂಕ್ ಆ್ಯಂಡ್ ಡ್ರೈವ್’ ಪ್ರಕರಣ ದಾಖಲಿಸಿ ಅವರ ಬೈಕ್ ಜಪ್ತಿ ಮಾಡಲಾಗಿದೆ. ನ್ಯಾಯಾಲಯದಲ್ಲಿ ದಂಡ ಕಟ್ಟುವಂತೆ ದಂಪತಿಗೆ ಸೂಚನೆ ನೀಡಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಕಬ್ಬನ್ ಪಾರ್ಕ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




