ಲಕ್ಷಾಂತರ ರೂ ಮೌಲ್ಯದ ಹಸುಗಳ ಕಳ್ಳತನ: ಒಂದು ಹಸುವಿನ ಕತ್ತು ಕೊಯ್ದ ಕೀಚಕರು

Share with

ನೆಲಮಂಗಲ, ಡಿಸೆಂಬರ್ 08: ಲಕ್ಷಾಂತರ ರೂ. ಮೌಲ್ಯದ ಮೂರು ಗಿರ್ ಹಸುಗಳನ್ನು (Gyr cattle) ಖದೀಮರು ಕಳ್ಳತನ (theft) ಮಾಡಿ ಪರಾರಿಯಾಗಿರುವಂತಹ ಘಟನೆ ನೆಲಮಂಗಲ ತಾಲೂಕಿನ ದಾಸನಪುರ ಹೋಬಳಿ ಗೌಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಳ್ಳತನ ಮಾಡಿದಷ್ಟೇ ಅಲ್ಲದೆ, ಒಂದು ಹಸುವಿನ ಕತ್ತು ಕೋಯ್ದು ವಿಕೃತಿ ಮೆರೆದಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಖದೀಮರ ಕೈಯಿಂದ ಅದೊಂದು ಹಸು ತಪ್ಪಿಸಿಕೊಂಡು ಬಂದಿದೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಿರ್ ಹಸುಗಳನ್ನು ಕದ್ದು ಪರಾರಿಯಾದ ಖತರ್ನಾಕ್ ಕಳ್ಳರು
ನೆಲಮಂಗಲ ತಾಲೂಕಿನ ಗೌಡಹಳ್ಳಿ ಗ್ರಾಮದ ವಿಜಯಲಕ್ಷ್ಮಿ ಎಂಬುವವರು ತಮ್ಮ ಮಗ ಹೈನುಗಾರಿಕೆ ಮಾಡುವ ಆಸೆ ಹೊಂದಿದ್ದರಿಂದ ಗುಜರಾತ್ನಿಂದ ಗಿರ್ ಹಸುಗಳನ್ನು ತರಿಸಿದ್ದರು. ಎರಡು ವರ್ಷಗಳಿಂದ ಗಿರ್ ಹಸುಗಳ ಜೊತೆ ಒಡನಾಟ ಹೊಂದಿದ್ದರು. ಆದರೆ ಖತರ್ನಾಕ್ ಕಳ್ಳರು ಈ ಹಸುಗಳನ್ನು ಕದ್ದು ಪರಾರಿಯಾಗಿದ್ದಾರೆ.

ಎರಡು ದಿನಗಳ ಹಿಂದೆ ಶೆಡ್ನಲ್ಲಿದ್ದ ನಾಲ್ಕು ಗಿರ್ ಹಸುಗಳನ್ನು ಕಳ್ಳತನ ಮಾಡಿದ್ದಾರೆ. ಈ ವೇಳೆ ಒಂದು ಹಸು ಗಲಾಟೆ ಮಾಡಿದ್ದು, ಹಸುವಿನ ಕತ್ತು ಕೊಯ್ದಿದ್ದಾರೆ. ಅಲ್ಲದೆ, ಆ ಹಸು ಅವರಿಂದ ತಪ್ಪಿಸಿಕೊಂಡು ಓಡಿ ಬಂದಿದೆ. ಬಳಿಕ ಮಾಲೀಕರು ಬಾಕಿ ಹಸುಗಳಿಗಾಗಿ ಹುಡುಕಾಡಿದ್ದು, ಎಲ್ಲಿಯೂ ಪತ್ತೆಯಾಗದ ಹಿನ್ನಲೆ ಮಾದನಾಯಕನ ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಕೇವಲ ಇದೊಂದೆ ಪ್ರಕರಣವಲ್ಲ ಮಾದನಾಯಕನಹಳ್ಳಿ, ನೆಲಮಂಗಲ ಭಾಗದಲ್ಲಿ ಈ ರೀತಿಯಾಗಿ ಹಸುಗಳ ಕಳ್ಳತನ ಪ್ರಕರಣಗಳು ಮೇಲಿಂದ ಮೇಲೆ ಸಂಭವಿಸುತ್ತಿವೆ. ಹೀಗಾಗಿ ಪೊಲೀಸರು ಆರೋಪಿಗಳಿಗೆ ತಕ್ಕ ಪಾಠ ಕಲಿಸಬೇಕಿದೆ.


Share with

Leave a Reply

Your email address will not be published. Required fields are marked *