ಅಹಮದಾಬಾದ್: ಜಗತ್ತಿನ ಕ್ರಿಕೆಟ್ ಪ್ರೇಮಿಗಳು ಕಾಯುತ್ತಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಇಂದು ಆರಂಭವಾಗುತ್ತಿದೆ. ಅಕ್ಟೋಬರ್ ಐದರಿಂದ ಮುಂದಿನ ಒಂದೂವರೆ ತಿಂಗಳು ಭಾರತದ ಕ್ರಿಕೆಟ್ ಅಭಿಮಾನಿಗಳು ಪಂದ್ಯಗಳನ್ನು ಆಸ್ವಾದಿಸುತ್ತಾರೆ. ಭಾರತ ಈ ಬಾರಿ ಟ್ರೋಫಿ ಎತ್ತಿಕೊಳ್ಳಬೇಕು ಎಂಬುದು ಭಾರತೀಯರ ಬಯಕೆಯಾಗಿದೆ. ಇದುವರೆಗೆ ಭಾರತ ಎರಡು ಏಕದಿನ ಕ್ರಿಕೆಟ್ ವಿಶ್ವಕಪ್‌ಗಳನ್ನು ಗೆದ್ದಿದೆ. ಕಪಿಲ್ ದೇವ್ ನಾಯಕತ್ವದಲ್ಲಿ 1983ರಲ್ಲಿ ಹಾಗೂ ಎಂ.ಎಸ್ ಧೋನಿ ನೇತೃತ್ವದಲ್ಲಿ 2011ರಲ್ಲಿ ಗೆದ್ದು ಬೀಗಿದೆ. 12 ವರ್ಷಗಳಿಂದ ಭಾರತ ಮತ್ತೊಂದು ಏಕದಿನ ವಿಶ್ವಕಪ್‌ಗಾಗಿ ಎದುರು ನೋಡುತ್ತಿದೆ.
ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಪಂದ್ಯಾವಳಿಯು ಹೊಸ ದಾಖಲೆಗಳನ್ನು ನಿರ್ಮಿಸಲು ಕಾರಣವಾಗುತ್ತದೆ. ವಿಶ್ವ ಕಪ್‌ನಲ್ಲಿ ಆಡಲಿರುವ 15 ಸದಸ್ಯರ ಭಾರತ ತಂಡ ವಿಶ್ವ ಕಪ್ ಗೆಲ್ಲುವ ಸಾಮರ್ಥ್ಯವನ್ನು ಹೊಂದಿದೆ.
ಈ ಕೂಟದಲ್ಲಿ ಹತ್ತು ತಂಡಗಳು ಭಾಗವಹಿಸಲಿದ್ದು ಮೊದಲ ಹಂತದಲ್ಲಿ ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ಪ್ರತೀ ತಂಡವೂ ಪ್ರತೀ ತಂಡವನ್ನು ಎದುರಿಸಬೇಕು. ಅಹಮದಾಬಾದಿನ ಅತ್ಯಂತ ವೈಭವದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭದ ಪಂದ್ಯಕ್ಕೆ ಚಾಲನೆ ಸಿಗಲಿದೆ.