ದೆಹಲಿ, ಮಾರ್ಚ್ 12: ದುಡಿಮೆ ಅನಿವಾರ್ಯ, ಉದ್ಯೋಗ ಯಾವುದಾದರೆ ದುಡಿದು ತಿನ್ನುವುದು ಮುಖ್ಯ ಎನ್ನುತ್ತಾ ಕೆಲಸ ಮಾಡುತ್ತಾರೆ. ಫುಡ್ ಡೆಲಿವರಿ ಬಾಯ್ (delivery boy) ಆಗಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲವೇ ಕೆಲವು ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಆರ್ಡರ್ ಮಾಡಿದ ಫುಡ್ ಬರುವುದರ ಹಿಂದೆ ಆಹಾರ ವಿತರಕರ ಶ್ರಮವಿರುತ್ತದೆ. ಸ್ವಲ್ಪ ಲೇಟ್ ಆದರೂ ರೇಗಾಡುತ್ತೇವೆ, ಆದರೆ ಕಷ್ಟವನ್ನು ಅರಿತುಕೊಳ್ಳುವ ಪ್ರಯತ್ನ ಯಾರು ಮಾಡಲ್ಲ. ಇದೀಗ ಫುಡ್ ಡೆಲಿವರಿ ಮಾಡಲು ಹೋದ ಡೆಲಿವರಿ ಬಾಯ್ ಗ್ರಾಹಕರ ಒಳ್ಳೆತನಕ್ಕೆ ಕರಗಿ ಹೋಗಿದ್ದಾನೆ. ದೆಹಲಿಯಲ್ಲಿ ಆರ್ಡರ್ ತಲುಪಿಸಲು ಹೋದ ಡೆಲಿವರಿ ಬಾಯ್‌ಗೆ ಅಲ್ಲಿನ ಗ್ರಾಹಕರು ಊಟಕ್ಕೆ ಕರೆದಿದ್ದು, ಈ ವ್ಯಕ್ತಿ ಗ್ರಾಹಕರ ಒಳ್ಳೆತನ ಕಂಡು ಕಣ್ಣೀರು ಹಾಕಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ.
ಆದಿತ್ಯ (Aditya) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಆಹಾರ ತಲುಪಿಸಲು ಹೋದ ಡೆಲಿವರಿ ಬಾಯ್‌ಗೆ ಗ್ರಾಹಕರು ಊಟಕ್ಕೆ ಮಾಡಲು ಕರೆದಿದ್ದಾರೆ. ತಟ್ಟೆಯಲ್ಲಿ ಬಡಿಸಿದ ಊಟವನ್ನು ನೋಡಿ ಆಹಾರ ವಿತರಕ ಭಾವುಕನಾಗಿರುವುದನ್ನು ಕಾಣಬಹುದು.
ಕಣ್ಣೀರು ಒರೆಸುತ್ತಾ ಕೆಲಸದ ನಡುವೆ ನನಗೆ ಹಸಿವಾಗಿದೆ ಎಂದು ತಿಳಿದೇ ಇರಲಿಲ್ಲ. ಸರ್ ನಾನು ಮನೆಯಿಂದ ಹೊರಟಾಗ ಒಂದು ಕಪ್ ಚಹಾ ಕುಡಿದಿದ್ದೆ ಅಷ್ಟೇ. ನನಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ. ಅವರಿಗಾಗಿ ದುಡಿಯಲೇಬೇಕು ಎಂದು ತನ್ನ ಕುಟುಂಬದ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕುವ ದೃಶ್ಯವನ್ನು ನೀವಿಲ್ಲಿ ನೋಡಬಹುದು.
ಈ ವಿಡಿಯೋ ಎಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ವಿಡಿಯೋ ಏಕೆ ಮಾಡಬೇಕು, ಬೇರೆಯವರ ಬಡತನ ಬಳಸಿಕೊಂಡು ವೀಕ್ಷಣೆಗಳನ್ನು ಪಡೆದುಕೊಳ್ಳುತ್ತೀರಿ. ನಾಚಿಕೆ ಗೇಡಿನ ವಿಷಯ ಎಂದು ಖಾರವಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇನ್ನೊಬ್ಬರ ಹಸಿವು ನೀಗಿಸುವ ಕೆಲಸ ಒಳ್ಳೆಯದೇ, ಆದರೆ ವಿಡಿಯೋ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ದೃಶ್ಯ ನೋಡಿ ಕಣ್ಣಲ್ಲಿ ನೀರು ಬಂತು ಎಂದಿದ್ದಾರೆ.





