ಬೀದಿ ನಾಯಿಗೆ ಊಟ ಹಾಕಿದ್ದಕ್ಕೆ ದಲಿತ ಮಹಿಳೆಗೆ ಹಲ್ಲೆ ಪ್ರಕರಣ: ಆರೋಪಿ ಚಂದ್ರಕಾಂತ್ ಭಟ್ ಬಂಧನ

Share with

ಉಡುಪಿ: ಬೀದಿನಾಯಿಗೆ ಊಟ ಹಾಕಿದ ಕಾರಣಕ್ಕಾಗಿ ದಲಿತ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಇಂದ್ರಾಳಿ ಹಯಗ್ರೀವ ನಗರದ ಚಂದ್ರಕಾಂತ ಭಟ್ ಎಂಬಾತನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಕುಂಜಿಬೆಟ್ಟು ಬುಡ್ನಾರ್ ನಿವಾಸಿ ಬೇಬಿ(50) ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ತಮ್ಮ ಪರಿಚಯದ ಚಂದ್ರಕಾಂತ ಎಂಬವರ ಮನೆ ಸಮೀಪ ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದು, ಈ ವೇಳೆ ಚಂದ್ರಕಾಂತ ನಾಯಿಗಳಿಗೆ ಊಟ ಹಾಕುವುದಕ್ಕೆ ಆಕ್ಷೇಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮರದ ರೀಪಿನಿಂದ ಬೇಬಿ ಅವರ ತಲೆಗೆ ಹೊಡೆದಿದ್ದಾರೆ ಎಂದು ದೂರಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಮಣಿಪಾಲ ಪೊಲೀಸರು ಆರೋಪಿಯನ್ನು ಮಾ.21ರಂದು ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ಆರೋಪಿಗೆ ಶಾಸಕರ ರಕ್ಷಣೆ: ದಸಂಸ ಆರೋಪ
ಬಂಧಿತ ಆರೋಪಿಯನ್ನು ಉಡುಪಿ ಶಾಸಕರ ಒತ್ತಡದಿಂದ ಅನಾರೋಗ್ಯದ ನೆಪ ಹೇಳಿಕೊಂಡು ರಾತ್ರಿಯೇ ಜೈಲಿನಿಂದ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿ ಆರೋಪಿಸಿದೆ.
ಈ ಬಗ್ಗೆ ಮಾಹಿತಿ ಪಡೆದುಕೊಂಡ ಸಂಘಟನೆಯ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಅವರನ್ನು ಭೇಟಿ ಮಾಡಿ, ಯಾವುದೇ ಕಾರಣಕ್ಕೂ ಆರೋಪಿಯು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ


Share with

Leave a Reply

Your email address will not be published. Required fields are marked *