ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಯಕ್ಷ ಕಲಾವಿದೆ ಆಗಿರೋ ಬಹುಮುಖಿ ಪ್ರತಿಭೆ ಚಿನ್ಮಯಿ ಶೆಟ್ಟಿ ಜೀವಬಿಟ್ಟಿದ್ದಾಳೆ. ಆರ್ಸಿಬಿ ಆಟಗಾರರನ್ನು ನೋಡಲು ಅಭಿಮಾನಿಗಳು ನಾ ಮುಂದು ತಾ ಮುಂದು ಅಂತ ಮುಗಿಬಿದ್ದಿದ್ದರು.

ಇದೇ ವೇಳೆ ಚಿನ್ನಸ್ವಾಮಿಗೆ ಅಪಾರ ಅಭಿಮಾನಿಗಳು ಹರಿದು ಬಂದ ಪರಿಣಾಮ ಏಕಾಏಕಿ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಇದೇ ಕಾಲ್ತುಳಿತದಲ್ಲಿ ಕನಕಪುರ ರೋಡ್ ಜ್ಯೋತಿ ಇಂಜಿನಿಯರಿಂಗ್ ಕಾಲೇಜಿನಲ್ಲಿ BE ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ನಿಧನರಾಗಿದ್ದಾರೆ. ಮೃತ ಚಿನ್ಮಯಿ ಶೆಟ್ಟಿ ಕ್ರಿಕೆಟ್ ಪ್ರೇಮಿ ಅಲ್ಲದೇ ಇದ್ದರು ಫ್ರೆಂಡ್ಸ್ ಜೊತೆ ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.
ಇನ್ನೂ, ತಮಗಿದ್ದ ಒಬ್ಬಳೇ ಮಗಳನ್ನು ಕಳೆದುಕೊಂಡ ಪೋಷಕರ ದುಃಖ ಹೇಳತೀರದು. ಹೌದು, ಮೃತ ಚಿನ್ಮಯಿ ಶೆಟ್ಟಿ ಉಡುಪಿ ಜಿಲ್ಲೆಯ ಹೆಬ್ರಿ ಮೂಲದ ಕರುಣಾಕರ ಶೆಟ್ಟಿ ಮತ್ತು ಉಪ್ಪಿನಂಗಡಿ ಪೂಜಾ ಶೆಟ್ಟಿಯವರ ಪುತ್ರಿಯಾಗಿದ್ದರು. ಇವರು ಬ್ಯಾಸ್ಕೆಟ್ ಬಾಲ್ ಪ್ಲೇಯರ್ ಕೂಡ ಆಗಿದ್ದರು. ‘ಯಕ್ಷತರಂಗ ಬೆಂಗಳೂರು’ ರಲ್ಲಿ ಯಕ್ಷಗಾನ ಕಲಿಯುತ್ತಿದ್ದರು. ಮುದ್ದಾದ ಮಗಳ ಮೇಲೆ ಪೋಷಕರು ಬೆಟ್ಟದಷ್ಟು ಕನಸು ಕಟ್ಟಿಕೊಂಡಿದ್ದರು.
ಆದ್ರೆ ಗೆಳೆಯರ ಜೊತೆಗೆ ಚಿನ್ನಸ್ವಾಮಿ ಮೈದಾನಕ್ಕೆ ಹೋಗಿ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ. ಮೃತ ಮಗಳ ಶವದ ಮುಂದೆ ಅವರ ತಾಯಿ ಎದ್ದೇಳಮ್ಮ ಚಿನ್ಮಯಿ ಅಂತ ಎದೆ ಬಡಿದುಕೊಂಡು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕುತ್ತಿದ್ದಾರೆ. ಈ ಭೀಕರ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಬೌರಿಂಗ್ ಮತ್ತು ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.