ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧನವಾಗಿ ಬಳ್ಳಾರಿ ಜೈಲಿನಲ್ಲಿರುವ ಆರೋಪಿ ನಟ ದರ್ಶನ್, ಬಳ್ಳಾರಿ ಜೈಲಿನಿಂದ ವಾಪಸ್ ಬೆಂಗಳೂರು ಜೈಲಿಗೆ ಕಳಿಸಿಕೊಡುವಂತೆ ಕೋರ್ಟ್ ಮೊರೆ ಹೋಗಲು ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ನಟ ದರ್ಶನ್ ಈ ಮೊದಲು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಆದರೆ ಜೈಲಿನೊಳಗೆ ರಾಜಾತಿಥ್ಯ ಪಡೆದು ಬಳಿಕ ದರ್ಶನ್‌ನನ್ನು ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ರವಾನಿಸಲಾಗಿತ್ತು. ಈಗ ಬೆಂಗಳೂರು ಜೈಲಿಗೆ ಶಿಫ್ಟ್ ಆಗಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆದರೆ ಇದೆಲ್ಲವೂ ಸೋಮವಾರ ಜಾಮೀನು ಆದೇಶವನ್ನು ನೋಡಿಕೊಂಡು ಬಳ್ಳಾರಿಯಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡುವಂತೆ ಮನವಿ ಮಾಡಿ ಕೋರ್ಟ್ ಮೊರೆ ಹೋಗಲು ದರ್ಶನ್ ಪರ ವಕೀಲರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಪ್ರದೋಷ್ ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಿರುವುದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಪ್ರದೋಷ್‌ನನ್ನು ಬೆಳಗಾವಿ ಜೈಲಿನಿಂದ ಮತ್ತೆ ಬೆಂಗಳೂರು ಜೈಲಿಗೆ ಶಿಫ್ಟ್ ಮಾಡಲು ಕೋರ್ಟ್ ಆದೇಶ ಮಾಡಿದೆ. ಅದೇ ರೀತಿ ದರ್ಶನ್ ಕೂಡ ಮತ್ತೆ ಬೆಂಗಳೂರು ಜೈಲಿಗೆ ಶಿಫ್ಟ್ ಆಗಲು ಕೋರ್ಟ್ ಮೊರೆ ಹೋಗಿ ಆದೇಶ ಪಡೆದುಕೊಳ್ಳಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಬಳ್ಳಾರಿ ಜೈಲಿನಲ್ಲಿ ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ನನ್ನು ನರ ವೈದ್ಯರು ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ಕಾರಣವನ್ನೂ ನ್ಯಾಯಾಲಯದ ಮುಂದೆ ಇಟ್ಟು ಬೆಂಗಳೂರಿಗೆ ಶಿಫ್ಟ್ ಆಗಲು ದರ್ಶನ್ ಮನವಿ ಮಾಡುವ ಸಾಧ್ಯತೆಯಿದೆ.
ಸೋಮವಾರ ದರ್ಶನ್‌ಗೆ ಜಾಮೀನು ಸಿಗಲಿದಿಯಾ..?
ಇನ್ನು ದರ್ಶನ್ ಜಾಮೀನು ಅರ್ಜಿ ವಿಚಾರಣೆಗೆ ಸಂಬಂಧಪಟ್ಟಂತೆ ವಾದ- ಪ್ರತಿವಾದಗಳನ್ನು ಆಲಿಸಿರುವ ನ್ಯಾಯಾಲಯ ಅಕ್ಟೋಬರ್ 14 ಅಂದರೆ ಸೋಮವಾರಕ್ಕೆ ಆದೇಶವನ್ನು ಕಾಯ್ದಿರಿಸಿದೆ. ಸೋಮವಾರ ಬರುವ ಜಾಮೀನು ಆದೇಶ ತಿರಸ್ಕೃತವಾದರೆ ಬೆನ್ನು ನೋವಿನ ಕಾರಣ ಇಟ್ಟುಕೊಂಡು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿಕೊಡುವಂತೆ ಕೋರ್ಟ್ ಮೊರೆ ಹೋಗಲು ತಯಾರಿಯನ್ನು ದರ್ಶನ್ ಪರ ವಕೀಲರು ಮಾಡಿಕೊಳ್ಳುತ್ತಿದ್ದಾರೆ.