ಮಂಗಳೂರು: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನ.23ರಂದು ನಡೆದ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಎಂಡೋಸಲ್ಫಾನ್ ಸಂತ್ರಸ್ತರ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಆಯಾ ಆರೋಗ್ಯ ಕೇಂದ್ರ ಮಟ್ಟದಲ್ಲಿ ಎಂಡೋ ಸಂತ್ರಸ್ತರು, ಅವರ ಪೋಷಕರು, ವೈದ್ಯಾಧಿಕಾರಿಗಳು, ಪಿಡಿಓ, ಗ್ರಾಮ ಕರಣಿಕರು ಅವರನ್ನೊಳಗೊಂಡ ತಂಡವನ್ನು ರಚಿಸಬೇಕು. ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆ ಅಧಿಕಾರಿಗಳು ಗ್ರಾಮವಾರು ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯನ್ನು ತಯಾರಿಸಿ ಅವರಿಗೆ ಅಗತ್ಯವಿರುವ ಔಷಧಗಳು ಹಾಗೂ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ತಪ್ಪದೇ ನೀಡಬೇಕು ಹಾಗೂ ಅವರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ 364 ಎಂಡೋಸಲ್ಫಾನ್ ಪೀಡಿತರು ಸಾವನ್ನಪ್ಪಿದ್ದು, 6,314 ಮಂದಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಎಂಡೋಸಲ್ಫಾನ್ ಕೋಶ ನೋಡಲ್ ಅಧಿಕಾರಿ ಡಾ|ನವೀನ್‍ಚಂದ್ರ ಕುಲಾಲ್ ಅವರು ತಿಳಿಸಿದರು.