ನವದೆಹಲಿ: ದೇಶದಲ್ಲಿ ಚಾಲ್ತಿಯಲ್ಲಿರುವ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳುವುದಕ್ಕೆ ಇರುವ ಅವಧಿಯನ್ನು ಅಕ್ಟೋಬರ್ 7 ರ ತನಕ ವಿಸ್ತರಣೆ ಮಾಡಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಶನಿವಾರ (ಸೆ.30) ತಿಳಿಸಿದೆ.
ಈ ಹಿಂದೆ 2,000 ರೂಪಾಯಿ ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30 ಕೊನೇ ದಿನ ಎಂದು ಆರ್‌ಬಿಐ ಗಡುವು ನಿಗದಿ ಮಾಡಿತ್ತು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಅಧಿಸೂಚನೆಯಲ್ಲಿ, “ಹಿಂಪಡೆಯುವ ಪ್ರಕ್ರಿಯೆಗೆ ನಿರ್ದಿಷ್ಟಪಡಿಸಿದ ಅವಧಿಯು ಅಂತ್ಯಗೊಂಡಿರುವುದರಿಂದ ಮತ್ತು ಪರಿಶೀಲನೆಯ ಆಧಾರದ ಮೇಲೆ 2000 ರೂಪಾಯಿಗಳ ನೋಟುಗಳ ಠೇವಣಿ/ವಿನಿಮಯದ ಅವಧಿಯಲ್ಲಿ ಪ್ರಸ್ತುತ ಅಕ್ಟೋಬರ್ 07 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ” ಎಂಬ ಉಲ್ಲೇಖವಿದೆ.