ಉಡುಪಿ: ವಾರಸುದಾರರ ಬರುವಿಕೆಗಾಗಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಶವದ ಅಂತ್ಯಸಂಸ್ಕಾರವನ್ನು ವಾರಸುದಾರರು ಸಂಪರ್ಕಿಸದೇ ಇರುವುದರಿಂದ ವಾರಾಂಬಳ್ಳಿ ಹಿಂದು ರುದ್ರಭೂಮಿಯಲ್ಲಿ ನಡೆಸಲಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್, ಕಾರ್ಯದರ್ಶಿ ಶೇಖರ್ ನಾಯ್ಕ, ಬ್ರಹ್ಮಾವರ ಪೋಲಿಸ್ ಠಾಣೆಯ ತನಿಖಾ ಸಹಾಯಕ ಪ್ರದೀಪ್ ಅವರ ಸಮಕ್ಷಮ ಅಂತ್ಯಸಂಸ್ಕಾರ ಪ್ರಕ್ರಿಯೆಗಳು ನಡೆದವು. ಅಂತ್ಯಸಂಸ್ಕಾರ ಕಾರ್ಯದಲ್ಲಿ ಸಮಾಜಸೇವಕ ನಿತ್ಯಾನಂದ ಒಳಕಾಡುವರು ನೆರವಾದರು. ಪ್ರಶಾಂತ ಪೂಜಾರಿ ಸಹಕರಿಸಿದರು.
ದಿಕ್ಕಿಲ್ಲದೆ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ವೃದ್ಧರೊಬ್ಬರು ಬ್ರಹ್ಮಾವರ ಅಪ್ಪ ಅಮ್ಮ ಅನಾಥಾಶ್ರಮದಲ್ಲಿ ಆಶ್ರಯಪಡೆದಿದ್ದರು. ಆಶ್ರಯ ಪಡೆಯುವ ಸಂದರ್ಭ ಅಚ್ಚುತ್ತ ನಾಯಕ್ ಎಂದು ಹೆಸರು ನೋಂದಾಯಿಸಿದ್ದರು. ಕಳೆದ ಐದು ವರ್ಷಗಳಿಂದ ಆಶ್ರಮದಲ್ಲಿ ಬದುಕು ಸಾಗಿಸುತ್ತಿದ್ದ ವೃದ್ಧರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಔಷಧೋಪಚಾರಗಳು ನಡೆಯುತ್ತಿದ್ದವು. ಚಿಕಿತ್ಸೆಗೆ ಸ್ಪಂದಿಸಿದೆ ಕೆಲವು ದಿನಗಳ ಹಿಂದೆ ವೃದ್ಧರು ಮೃತಪಟ್ಟಿದ್ದರು.