ಉಡುಪಿ: ಕಾಂಗ್ರೆಸ್ ಸರಕಾರವು ದಲಿತರ ಸಮಾಧಿ ಮೇಲೆ ಕುಳಿತು ಅಧಿಕಾರ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷವು ಮತಬ್ಯಾಂಕಿಗಾಗಿ ಮಾತ್ರ ದಲಿತರನ್ನು ಓಲೈಸುತ್ತದೆ. ಕಾಂಗ್ರೆಸ್ಸಿಗರು ದಲಿತರಿಗೆ ವಿವರಿಸಲಾಗದಷ್ಟು ಅನ್ಯಾಯವನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಲು ದಲಿತ ಸಮಾಜ ಸನ್ನದ್ಧರಾಗಬೇಕು ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು ಕರೆ ನೀಡಿದರು.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದಲಿತರನ್ನು ತುಳಿದು, ಅವರ ಬೆನ್ನಿಗೆ ಚೂರಿ ಹಾಕಿ ಅವರನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಗೆ ನೂರು ವರ್ಷದ ಇತಿಹಾಸ ಇದೆ. ಎರಡು ಬಾರಿ ಅಂಬೇಡ್ಕರ್ ಅವರನ್ನು ಸೋಲಿಸಿರುವುದು ಮತ್ತು ಅವರನ್ನು ಸೋಲಿಸಿದವರಿಗೆ ಪದ್ಮ ಪ್ರಶಸ್ತಿ ನೀಡಿರುವುದು ಕಾಂಗ್ರೆಸ್ ನ ದಲಿತ ವಿರೋಧಿ ಕರಾಳ ಇತಿಹಾಸ. ಕೇವಲ ವೋಟ್ ಬ್ಯಾಂಕ್ ಗಾಗಿ ಮಾತ್ರ ದಲಿತರನ್ನು ದುರ್ಬಳಕೆ ಮಾಡಿಕೊಂಡು ಬಂದಿರುವ ಕಾಂಗ್ರೆಸ್ಸಿಗೆ ಮುoದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ದಿನಕರ ಬಾಬು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರೆ ಗೀತಾಂಜಲಿ ಎಮ್.ಸುವರ್ಣ, ಜಿಲ್ಲಾ ಮಾದ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಚಂದ್ರ ಪಂಚವಟಿ, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಡಿ.ಬಿ., ಎಸ್.ಸಿ.ಮೋರ್ಚಾ ಜಿಲ್ಲಾ ಮುಖಂಡರಾದ ಮಾಧವ ಸಾಲಿಗ್ರಾಮ, ಹಿರಿಯಣ್ಣ ಉಪ್ಪೂರು ಉಪಸ್ಥಿತರಿದ್ದರು.