ನವದೆಹಲಿ: ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (EOW) ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿದೆ. ಯಂಗ್ ಇಂಡಿಯನ್ (YI) ಗೆ ನೀಡಿದ ದೇಣಿಗೆಗಳಿಗೆ ಸಂಬಂಧಿಸಿದ ವಿವರವಾದ ಹಣಕಾಸು ಮತ್ತು ವಹಿವಾಟು ದಾಖಲೆಗಳನ್ನು ಒದಗಿಸುವಂತೆ ಕೇಳಿದೆ. ನವೆಂಬರ್ 29 ರಂದು ಹೊರಡಿಸಲಾದ ನೋಟಿಸ್ನಲ್ಲಿ ಶಿವಕುಮಾರ್ ಡಿಸೆಂಬರ್ 19 ರೊಳಗೆ ದಾಖಲೆಗಳನ್ನು ಸಲ್ಲಿಸಬೇಕು ಎಂದು ಸೂಚಿಸಿದೆ.

ಆರ್ಥಿಕ ಅಪರಾಧ ವಿಭಾಗ ನೀಡಿರುವ ನೋಟಿಸ್ ನಲ್ಲಿ, ಡಿಕೆ ಶಿವಕುಮಾರ್ ಅವರ ವೈಯಕ್ತಿಕ ಹಿನ್ನೆಲೆ, ಕಾಂಗ್ರೆಸ್ ಪಕ್ಷದ ಜತೆಗಿನ ಸಂಬಂಧ ಹಾಗೂ ಯಂಗ್ ಇಂಡಿಯಾಕ್ಕೆ ವರ್ಗಾವಣೆ ಮಾಡಿರುವ ಹಣಕಾಸು ಮೂಲಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಿದೆ.
ನೋಟಿಸ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಇದೊಂದು ಆಘಾತಕಾರಿ ಬೆಳವಣಿಗೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆ ವೇಳೆ ನಾನು ಜಾರಿ ನಿರ್ದೇಶನಾಲಯಕ್ಕೆ ಈಗಾಗಲೇ ಎಲ್ಲಾ ಮಾಹಿತಿಯನ್ನು ಒದಗಿಸಿದ್ದೇನೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಯಂಗ್ ಇಂಡಿಯಾ ನಮ್ಮ ಸಂಸ್ಥೆಯಾಗಿದೆ. ನಾವು ಕಾಂಗ್ರೆಸ್ ಪಕ್ಷದವರಾಗಿ ಸಂಸ್ಥೆಯನ್ನು ಬೆಂಬಲಿಸುವುದು ನಮ್ಮ ಕರ್ತವ್ಯವಾಗಿದೆ. ಕೇಂದ್ರ ಹಾಗೂ ಆರ್ಥಿಕ ಅಪರಾಧ ವಿಭಾಗ ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಗೆ ನೋಟಿಸ್ ನೀಡುವ ಮೂಲಕ ಕಿರುಕುಳ ನೀಡುವ ದುರುದ್ದೇಶ ಹೊಂದಿದೆ ಎಂದು” ಆರೋಪಿಸಿದ್ದಾರೆ.
ನಾವು ಈ ವಿಷಯದ ಬಗ್ಗೆ ಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸುತ್ತೇವೆ. ಇದೊಂದು ಕಿರುಕುಳವಾಗಿದೆ. ಅದು ನಮ್ಮ ಹಣ. ನಮ್ಮ ಹಣಕ್ಕೆ ತೆರಿಗೆ ಪಾವತಿಸಿದ್ದೇವೆ. ಇದರಲ್ಲಿ ಯಾವುದೇ ಅಕ್ರಮಗಳಿಲ್ಲ. ಪಿಎಂಎಲ್ ಎ ಪ್ರಕರಣ ಮುಗಿದಿದ್ದು, ಈಗಾಗಲೇ ಆರೋಪಪಟ್ಟಿ ಸಲ್ಲಿಸಿದೆ. ಈ ತನಿಖಾ ಸಂಸ್ಥೆಗಳು ಇದಕ್ಕಿಂತ ಹೆಚ್ಚಿನದ್ದೇನನ್ನು ಮಾಡಲು ಸಾಧ್ಯ? ಹೆಚ್ಚೆಂದರೆ ಕಾಂಗ್ರೆಸ್ ಮುಖಂಡರಿಗೆ ಕಿರುಕುಳ ನೀಡಬಹುದು. ಈ ಮೂಲಕ ತಪ್ಪು ಗ್ರಹಿಕೆ ಮೂಡಿಸಲು ಪ್ರಯತ್ನಿಸುತ್ತಿರುವುದಾಗಿ ಡಿಕೆಶಿ ದೂರಿದರು.




