ನವದೆಹಲಿ, ನವೆಂಬರ್ 20: ನವೆಂಬರ್ 10ರಂದು ನವದೆಹಲಿಯ ಕೆಂಪು ಕೋಟೆಯ (Red Fort) ಹೊರಗೆ ನಡೆದ ಬಾಂಬ್ ಸ್ಫೋಟದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇನ್ನೂ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ. ಈ ಮೂಲಕ ಒಟ್ಟು ಬಂಧಿತರ ಸಂಖ್ಯೆ 6ಕ್ಕೆ ಏರಿದೆ. ಪಟಿಯಾಲ ಹೌಸ್ ನ್ಯಾಯಾಲಯದ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ನೀಡಿದ ವಿಚಾರಣೆಯ ಆದೇಶದ ಮೇರೆಗೆ ನಾಲ್ವರು ಆರೋಪಿಗಳನ್ನು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ವಶಕ್ಕೆ ಪಡೆಯಲಾಗಿದೆ. ನವೆಂಬರ್ 10ರಂದು ನೇತಾಜಿ ಸುಭಾಷ್ ಮಾರ್ಗದಲ್ಲಿ ನಡೆದ ಸ್ಫೋಟದಲ್ಲಿ 15 ಜನರು ಸಾವನ್ನಪ್ಪಿದರು. ಹರಿಯಾಣದ ಫರಿದಾಬಾದ್‌ನಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಮಾಡ್ಯೂಲ್‌ನಿಂದ ಸ್ಫೋಟಕಗಳನ್ನು ತುಂಬಿದ ಕಾರು ಸ್ಫೋಟಿಸಲಾಗಿತ್ತು.
ಬಂಧಿತ ಆರೋಪಿಗಳನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ಡಾ. ಮುಜಮ್ಮಿಲ್ ಶಕೀಲ್ ಗನೈ, ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನ ಡಾ. ಅದೀಲ್ ಅಹ್ಮದ್ ರಾಥರ್, ಉತ್ತರ ಪ್ರದೇಶದ ಲಕ್ನೋದ ಡಾ. ಶಾಹೀನ್ ಸಯೀದ್, ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನ ಮುಫ್ತಿ ಇರ್ಫಾನ್ ಅಹ್ಮದ್ ವಾಗೆ ಎಂದು ಗುರುತಿಸಲಾಗಿದೆ. ಏಜೆನ್ಸಿಯ ಪ್ರಕಾರ, ಅವರೆಲ್ಲರೂ ದೆಹಲಿಯ ದಾಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಮುಂದಿನ ವಿಚಾರಣೆಗಾಗಿ ಅವರನ್ನು ಪಟಿಯಾಲ ಹೌಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.





