ಉಪ್ಪಳ: ಮಂಗಲ್ಪಾಡಿ ಗ್ರಾಮ ಪಂಚಾಯತ್‌ನ 7 ಮತ್ತು9ನೇ ವಾರ್ಡ್ ಸಂಗಮಿಸುವ ಪ್ರತಾಪನಗರದಿಂದ ಪುಳಿಕುತ್ತಿ ಕಾಲನಿಗೆ ಪ್ರವೇಶಿಸುವಲ್ಲಿ ಮಳೆ ನೀರು ಹರಿಯಲು ವ್ಯವಸ್ಥಿತ ಚರಂಡಿ ಹಾಗೂ ಸಂಕ ನಿರ್ಮಿಸಲು ಸ್ಥಳಿಯರು ಒತ್ತಾಯಿಸಿದ್ದಾರೆ.
ಮಳೆಗಾಲದಲ್ಲಿ ಈ ಚರಂಡಿ ಮೂಲಕ ವಿವಿಧ ಕಡೆಗಳಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಕುಬಣೂರು ಹೊಳೆಯನ್ನು ಸೇರುತ್ತಿದೆ. ಆದರೆ ಕಿರಿದಾದ ಸಂಕದಿಂದಾಗಿ ನೀರಿನಲ್ಲಿ ಹರಿದುಬರುತ್ತಿರುವ ಕಸಕಡ್ಡಿ, ತ್ಯಾಜ್ಯಗಳು ಹರಿಯದೆ ಅಲ್ಲಿಯೇ ಉಳಿದುಕೊಳ್ಳುತ್ತಿರುವುದರಿಂದ ಚರಂಡಿಯಲ್ಲಿ ನೀರು ತುಂಬಿ ಪರಿಸರ ನಿವಾಸಿಗಳ ಹಿತ್ತಿಲು, ಅಂಗಳ ಹಾಗೂ ಪರಿಸರದ ರಸ್ತೆಯಲ್ಲಿ ತುಂಬಿಕೊಳ್ಳುತ್ತಿದೆ.
ಇದರಿಂದ ಪಾದಚಾರಿಗಳ ಸಹಿತ ಮನೆಯವರು ತೀರಾ ಸಮಸ್ಯೆಗೀಡಾಗುತ್ತಿದ್ದಾರೆ. ಈ ಪರಿಸರದ ಚರಂಡಿಯನ್ನು ಉದ್ಯೋಗ ಖಾತರಿ ಕಾರ್ಮಿಕರು ದುರಸ್ಥಿಗೊಳಿಸಿದ್ದಾರೆ. ಇಲ್ಲಿ ಸಂಕವನ್ನು ಅಗಲಗೊಳಿಸಿದರೆ ಮಾತ್ರವೇ ನೀರಿನ ಜೊತೆ ಕಸಕಡ್ಡಿಗಳು ಹರಿಯಲು ಸಾದ್ಯವಾಗಬಹುದೆಂದು ಸ್ಥಳೀಯರು ತಿಳಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ವ್ಯವಸ್ಥಿತ ಸಂಕ ಹಾಗೂ ಚರಂಡಿ ನಿರ್ಮಿಸಲು ಊರವರು ಒತ್ತಾಯಿಸಿದ್ದಾರೆ.