ಕುಡಿಯುವ ನೀರಿನ ಶೀತಲೀಕೃತ ಯಂತ್ರಗಳ ದುರಸ್ತಿಗೆ ಆಗ್ರಹ

Share with

ಉಡುಪಿ: ಉಡುಪಿ ನಗರದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಧಗೆ ಹೆಚ್ಚಾಗುತ್ತಿದೆ. ತಾಪಮಾನ ವಿಪರೀತ ಏರಿಕೆಯಾಗಿದೆ. ಈ ಸುಡು ಬಿಸಿಲಿಗೆ ಯಾರದ್ರೂ ಪ್ರಜ್ಞೆತಪ್ಪಿಬಿದ್ದರೆ ಅಥವಾ ಬಾಯಾರಿಕೆಯಿಂದ ಬಳಲಿದರೆ ಕುಡಿಯಲು ಹನಿ ನೀರು ಸಿಗದ ಪರಿಸ್ಥಿತಿ ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಎದುರಾಗಿದೆ.

ಹಳೆ ಸರಕಾರಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ, ಗಡಿಯಾರ ಗೋಪುರದ ಬಳಿಯ ಪೋಲಿಸ್ ಚೌಕಿ ಮೊದಲಾದ ಸಾರ್ವಜನಿಕರು ತಂಗುವ ಸ್ಥಳಗಳಲ್ಲಿ ಶೀತಲೀಕೃತ ಕುಡಿಯುವ ನೀರಿನ ಯಂತ್ರಗಳಿದ್ದರೂ ಸಮರ್ಪಕ ನಿರ್ವಹಣೆಯಿಲ್ಲದೆ ಕೆಟ್ಟುಹೋಗಿವೆ. ಸಾರ್ವಜನಿಕರು ದಾಹ ತೀರಿಸಲು ನೀರಿನ ಘಟಕಗಳತ್ತ ತೆರಳಿ ವಾಪಸ್ಸಾಗುವ ದೃಶ್ಯಗಳು ಕಂಡುಬರುತ್ತಿವೆ. ಶ್ರೀಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳದಲ್ಲಿಯೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬರುವ ಯಾತ್ರಿಕರು ಕುಡಿಯುವ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ಉದ್ಭವಿಸಿದೆ.

ಬಿಸಿಲಿನ ಶಾಖಾದಿಂದ ಜನರು ಕಂಗೆಟ್ಟು ಹೋಗಿದ್ದಾರೆ. ಜಿಲ್ಲಾಡಳಿತ, ನಗರಸಭೆ, ತಕ್ಷಣವಾಗಿ ನಗರದ ಸಾರ್ವಜನಿಕ ಸ್ಥಳಗಲ್ಲಿರುವ ಶೀತಲೀಕೃತ ಕುಡಿಯುವ ನೀರಿನ ಯಂತ್ರಗಳನ್ನು ದುರಸ್ಥಿಪಡಿಸಬೇಕು. ಅಲ್ಲದೆ, ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ನೀರಿನ ಅರವಟ್ಟಿಗೆ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.


Share with

Leave a Reply

Your email address will not be published. Required fields are marked *