Dharamasthala Case: 3 ಸ್ಥಳಗಳಲ್ಲೂ ಪತ್ತೆಯಾಗದ ಕಳೇಬರ..!

Share with

ಬೆಳ್ತಂಗಡಿ: ಧರ್ಮಸ್ಥಳ ಅರಣ್ಯದಲ್ಲಿ ಅನಾಮಿಕ ಗುರುತಿಸಿದ 13 ಸ್ಥಳಗಳ ಪೈಕಿ 3ನೇ ಸ್ಥಳದಲ್ಲೂ ಯಾವುದೇ ಕಳೇಬರ ಸಿಗದಿರುವುದು ಎಸ್‌.ಐ.ಟಿ. ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 30 ರಂದು 2ನೇ ಗುರುತು ಮಾಡಿದ ಸ್ಥಳದಲ್ಲಿ ಏನೂ ಸಿಗದ ಹಿನ್ನೆಲೆಯಲ್ಲಿ 3ನೇ ಗುರುತು ಮಾಡಿದ ಸ್ಥಳದಲ್ಲಿ 1 ಗಂಟೆಯಿಂದ 3 ಗಂಟೆಯವರೆಗೆ ಎಸ್.ಐ.ಟಿ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಕಳೇಬರದ ಯಾವುದೇ ಕುರುಹು ಸಿಕ್ಕಿಲ್ಲ ಎನ್ನಲಾಗಿದೆ.

ಸದ್ಯ ಊಟದ ವಿರಾಮಕ್ಕಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು ಸಂಜೆ 4 ಗಂಟೆ ಬಳಿಕ ಮಹಜರು ಮಾಡಿದ 4ನೇ ಸ್ಥಳದಲ್ಲಿ ಕಾರ್ಯಾಚರಣೆ ನಡೆಯಲಿದೆ.

ಈಗಾಗಲೇ ಎಸ್‌.ಐ.ಟಿ. ಅಧಿಕಾರಿಗಳು ಬೀಡುಬಿಟ್ಟಿದ್ದು ಕಾಡಿನಲ್ಲಿ ಸೊಳ್ಳೆಗಳ ಕಾಟದಿಂದ ನಿಲ್ಲಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅನಾಮಿಕ ಬಹಳಷ್ಟು ನಿಖರವಾಗಿ ಜು.28 ರಂದು 13 ಸ್ಥಳಗಳನ್ನು ಗುರುತಿಸಿ ಅಲ್ಲಿ ಶವ ಹೂತು ಹಾಕಿರುವುದಾಗಿ ತಿಳಿಸಿದ್ದ. ಅದರಂತೆ ಅಷ್ಟೂ ಸ್ಥಳಗಳಲ್ಲಿ ಎ.ಎನ್.ಎಫ್., ಪೊಲೀಸ್ ಭದ್ರತೆ ನೀಡಲಾಗಿತ್ತು.

2019 ರಲ್ಲಿ ಬೆಳ್ತಂಗಡಿಗೆ ಪ್ರವಾಹ ಎದುರಾದಾಗ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿ ಹಾನಿಯಾಗಿತ್ತು. ಹಾಗಾಗಿ ಅನಾಮಿಕ ಒಂದು ವೇಳೆ ಶವ ಹೂತು ಹಾಕಿದ್ದಿದ್ದರೆ, ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಸಾಧ್ಯತೆಗಳ ಬಗ್ಗೆ ಅನುಮಾನಿಸಲಾಗಿತ್ತು. ಆದರೆ ಅರಣ್ಯದಲ್ಲಿ ಹೂತು ಹಾಕಿದ ಸ್ಥಳದಲ್ಲೂ ಸಿಕ್ಕಿಲ್ಲ ಎಂದಾಕ್ಷಣ ಪ್ರಕರಣ ಗೊಂದಲಮಯವಾಗ ತೊಡಗಿದೆ.

ಈ 13 ಸ್ಥಳಗಳಲ್ಲದೆ ಇಂತಹ 8 ಪ್ರದೇಶವಿದೆ ಎಂದು ಅನಾಮಿಕ ಹೇಳಿದ್ದಾನೆ ಎಂಬ ಮಾಹಿತಿಗಳಿದ್ದು, ಇವೆಲ್ಲದರ ಕಾರ್ಯಾಚರಣೆಗೆ ಎಷ್ಟು ಸಮಯ ಪಡೆಯಬಹುದು ಎಂಬುದೇ ಅಚ್ಚರಿಯ ಬೆಳವಣಿಗೆಗೆ ಕಾರಣವಾಗಿದೆ.


Share with

Leave a Reply

Your email address will not be published. Required fields are marked *