ಬೆಂಗಳೂರು, ಫೆಬ್ರವರಿ 11: ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ ವಿಚಾರವಾಗಿ ಬಿಗ್ ಅಪ್ಡೇಟ್ ಸಿಕ್ಕಿದ್ದು, ಉದ್ಯಮಿ ಸಾವಿಗೆ ಐಟಿ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಆರೋಪಿಸಲಾಗಿತ್ತಾದರೂ ಈ ಬಗ್ಗೆ ಪ್ರಕರಣ ದಾಖಲಿಸುವಷ್ಟು ಸಾಕ್ಷ್ಯಗಳೂ ತನಿಖೆ ವೇಳೆ ಪೊಲೀಸರಿಗೆ ಸಿಕ್ಕಿಲ್ಲ. ಪ್ರಕರಣ ಸಂಬಂಧ ತನಿಖೆಗೆ ಡಿಐಜಿ ಮತ್ತು ಎಸ್ಪಿ ಹಂತದ ಅಧಿಕಾರಿಗಳನ್ನೊಳಗೊಂಡ ಎಸ್ಐಟಿ ತಂಡ ರಚನೆ ಮಾಡಿ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದರು. ಎಸ್ಐಟಿ ಇಷ್ಟು ದಿನಗಳ ಕಾಲ ನಡೆಸಿರುವ ತನಿಖೆ ವೇಳೆ FIR ದಾಖಲಿಸು ಅಗತ್ಯವಿರುವ ಕನಿಷ್ಠ ಸಾಕ್ಷ್ಯವೂ ದೊರೆತಿಲ್ಲ ಎನ್ನಲಾಗಿದೆ.
ಅಸಲಿಗೆ ತನಿಖೆ ವೇಳೆ ಸಿ.ಜೆ.ರಾಯ್ ಆತ್ಮಹತ್ಯೆಗೆ ಇಂತಹ ವ್ಯಕ್ತಿ ಅಥವಾ ಸಂಸ್ಥೆ ಪ್ರಚೋದನೆ ನೀಡಿದೆ ಎಂದು ಸಾಭೀತು ಮಾಡಬಹುದಾದ ಯಾವುದೇ ಮಾಹಿತಿ ಸಿಕ್ಕಿಲ್ಲ. ರಾಯ್ ಡೈರಿಯಲ್ಲಿಯೂ ಈ ಬಗ್ಗೆ ಯಾವುದೇ ಉಲ್ಲೇಖ ಇಲ್ಲ. ಜೊತೆಗೆ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ದಿನದಂದು ಐಟಿ ಅಧಿಕಾರಿಗಳು ಅವರ ವಿಚಾರಣೆಯನ್ನು ನಡೆಸಿಯೇ ಇಲ್ಲ. ಹೀಗಾಗಿ ವಿಚಾರಣೆ ಹೆಸರಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗಿ ರಾಹ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳುವುದೂ ಕಷ್ಟಸಾಧ್ಯ. ಅಲ್ಲದೆ ಹಲವಾರು ಬಾರಿ ಅದಾಗಲೇ ರಾಯ್ ಐಟಿ ವಿಚಾರಣೆಯನ್ನೂ ಎದುರಿಸಿದ್ದು, ಹಿಂದೆ ಆ ಸಮಯದಲ್ಲಿ ಅವರು ಯಾವುದೇ ದುಡುಕಿನ ನಿರ್ಧಾರ ಮಾಡಿರಲಿಲ್ಲ. ಹೀಗಾಗಿ ಅತ್ಮಹತ್ಯೆಗೆ ಪ್ರಚೋದನೆಯಾಗಿಲ್ಲ ಎಂಬ ಲೆಕ್ಕಾಚಾರದಲ್ಲಿ ಎಸ್ಐಟಿ ಇದೆ ಎನ್ನಲಾಗಿದೆ.
ಉದ್ಯಮಿ ಜೀವ ಪಡೆದಿದ್ದು ವ್ಯವಹಾರ?
ಆದರೆ ಉದ್ಯಮಿಯ ಆತ್ಮಹತ್ಯೆಗೆ ಅಸಲೀ ಕಾರಣ ಏನೆಂದು ಬಯಲು ಮಾಡಬೇಕಾದ ಅನಿವಾರ್ಯತೆ ತನಿಖಾ ತಂಡದ ಮುಂದಿದೆ. ಈ ಹಿನ್ನೆಲೆ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ಮುಂದುವರಿದಿದೆ. ವ್ಯಾವಹಾರಿಕವಾಗಿ ರಾಯ್ ಕುಗ್ಗಿದ್ದ ರಾಯ್, ಅದೇ ಕಾರಣಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ತನಿಖಾ ತಂಡಕ್ಕೆ ಸಿಕ್ಕಿದೆ ಎನ್ನಲಾಗಿದೆ. ಹೀಗಾಗಿ ರಾಯ್ ವ್ಯವಹಾರ, ಲಾಭ ಹಾಗೂ ನಷ್ಟದ ವಿಚಾರವಾಗಿ ಅಧಿಕಾರಿಗಳು ಪರಿಶೀಲನೆಗೆ ಮುಂದಾಗಿದ್ದಾರೆ. ಆದ್ರೆ ಇದುವರೆಗೆ ಜಪ್ತಿ ಮಾಡಿರುವ ದಾಖಲೆಗಳ ಬಗ್ಗೆ ಐಟಿ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡುತ್ತಿಲ್ಲವಂತೆ. ಹೀಗಾಗಿ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣವನ್ನ ಯುಡಿಆರ್ ಆಗಿಯೇ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ.





