ನಟಿ ರಚಿತಾ ರಾಮ್ ಅವರ ವಿರುದ್ಧ ಸಂಜು ವೆಡ್ಸ್ ಗೀತಾ ಚಿತ್ರತಂಡ ಆಕ್ರೋಶ ಹೊರಹಾಕಿದೆ. ಸಂಜು ವೆಡ್ಸ್ ಗೀತಾ ಸಿನಿಮಾ 2 ಸಿನಿಮಾ ಮೊದಲು ಜನವರಿ 17ರಂದು ರಿಲೀಸ್ ಆಗಿತ್ತು. ಆದರೆ ಆಗ ತೆಲುಗು ನಿರ್ಮಾಪಕರೊಬ್ಬರು, ರಿಮೇಕ್ ಆರೋಪ ಮಾಡಿ ಹೈದರಾಬಾದ್ ನ್ಯಾಯಾಲಯದಿಂದ ಸಂಜು ವೆಡ್ಸ್ ಗೀತಾ 2 ಸಿನಿಮಾ ಪ್ರದರ್ಶನಕ್ಕೆ ತಡೆಯಾಜ್ಞೆ ತಂದಿದ್ದರು. ಇದೀಗ ಪ್ರಕರಣ ಇತ್ಯರ್ಥವಾಗಿ ಮರು ಬಿಡುಗಡೆಯಾಗಿದೆ..
ನಾಗಶೇಖರ್ ನಿರ್ದೇಶಿಸಿರುವ ಸಂಜು ವೆಡ್ಸ್ ಗೀತಾ 2ದಲ್ಲಿ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರತಂಡವು ಸಿನಿಮಾದ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಆದರೆ ರಚಿತಾ ರಾಮ್ ಮಾತ್ರ ಪತ್ತೆಯೇ ಇಲ್ಲ. ಈ ಹಿಂದೆ ಜನವರಿಯಲ್ಲಿ ಸಿನಿಮಾ ರಿಲೀಸ್ ಸಂದರ್ಭದಲ್ಲಿಯೂ ರಚಿತಾ ರಾಮ್ ಒಮ್ಮೆಯೂ ಚಿತ್ರ ಪ್ರಚಾರಕ್ಕೆ ಬಂದಿರಲಿಲ್ಲ. ಈ ಬಾರಿ ಕೂಡ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದೇ ಈಗ ಚಿತ್ರತಂಡದ ಆಕ್ರೋಶಕ್ಕೆ ಕಾರಣವಾಗಿದೆ. ರಚಿತಾ ರಾಮ್ ಸಿನಿಮಾ ಮಾಡಿ ಹೋಗ್ತಾರೆ..ಆದರೆ ಪ್ರಮೋಷನ್‌ಗೆ ಬರೋದಿಲ್ಲ ಎಂಬುದೇ ಸಿನಿಮಾ ತಂಡದವರ ತೀವ್ರ ಅಸಮಾಧಾನ ಆಗಿದೆ.
ಫಿಲ್ಮ್ ಚೇಂಬರ್‌ಗೆ ದೂರು
ಸಿನಿಮಾ ಪ್ರಮೋಷನ್‌ಗೆ ಬಾರದ ನಟಿ ರಚಿತಾ ರಾಮ್ ವಿರುದ್ಧ ನಾಗಶೇಖರ್ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ, ಚಿತ್ರತಂಡದವರೆಲ್ಲ ಸೇರಿ ರಚಿತಾ ರಾಮ್ ವಿರುದ್ಧ ದೂರು ಸಲ್ಲಿಸಿದ್ದಾರೆ. ಅದಕ್ಕೂ ಮೊದಲು ಮಾಧ್ಯಮದವರ ಜೊತೆ ಮಾತನಾಡಿದ ನಾಗಶೇಖರ್ ʼನಮ್ಮ ಸಿನಿಮಾದ ನಾಯಕಿಯಾದ ರಚಿತಾ ರಾಮ್ ಅವರು ಸಿನಿಮಾ ಪ್ರಮೋಷನ್‌ಗೆ ಬರ್ತಿಲ್ಲ. ರಚಿತಾ ರಾಮ್ ಬರಬೇಕು ಎನ್ನೋದು ನಮ್ಮ ಮನವಿಯಾಗಿತ್ತು. ಆದರೆ ಅವರು ಬಂದಿಲ್ಲ. ನಾವು ರಾಕ್‌ಲೈನ್ ವೆಂಕಟೇಶ್ ಅವರ ಬಳಿ ಕೂಡ ರಚಿತಾ ರಾಮ್ ಬಗ್ಗೆ ಮಾಡಿದ್ದೇವೆ. ಅವರೂ ನಟಿಯೊಂದಿಗೆ ಮಾತನಾಡಿದ್ದಾರೆ. ಆದರೆ ಪ್ರಯತ್ನ ವಿಫಲವಾಗಿದೆʼ ಎಂದು ತಿಳಿಸಿದರು.
ʼಸಿನಿಮಾಗೆ ನಾವು ಕೋಟ್ಯಂತರ ರೂಪಾಯಿ ಹಾಕ್ತೇವೆ. ಕಲಾವಿದರಿಗೆ ಊಟ, ಬಟ್ಟೆ..ಸಂಭಾವನೆ ಎಲ್ಲ ಕೊಡ್ತೇವೆ. ಗೌರವದಿಂದ ನಡೆಸಿಕೊಳ್ಳುತ್ತೇವೆ. ಇಷ್ಟೆಲ್ಲ ಆದ್ಮೇಲೆ ಪ್ರಮೋಷನ್ ವೇಳೆ ಅವರು ನಮ್ಮ ಕೈಹಿಡಿಯಬೇಕಾಗುತ್ತದೆ. ಬರೀ ಸಿನಿಮಾದಲ್ಲಿ ಆಕ್ಟ್ ಮಾಡೋದಷ್ಟೇ ಅವರ ಕೆಲಸ ಅಲ್ಲ. ಸಿನಿಮಾ ಗೆಲ್ಲಬೇಕು ಎಂದು ಅವರು ನಮ್ಮ ಜೊತೆಗೆ ಇರಬೇಕಿತ್ತು. ಅದು ಅವರ ಧರ್ಮವಾಗಿತ್ತು..ಆದರೆ ನಮ್ಮ ಯಾವುದೇ ಮನವಿಗೂ ಒಳ್ಳೆಯ ರೀತಿಯಲ್ಲಿ ಅವರು ಪ್ರತಿಕ್ರಿಯೆ ಕೊಟ್ಟಿಲ್ಲ. ವಾಣಿಜ್ಯ ಮಂಡಳಿ ಇಂಥ ಕಲಾವಿದರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಏನಾದ್ರೂ ಗಲಾಟೆ-ಮನಸ್ತಾಪ ಆಗಿದ್ರೆ ಬಂದು ಮಾತಾಡಲಿ. ನಮ್ಮಿಂದ ಏನು ತೊಂದರೆ ಆಗಿದೆ..ಅನ್ಯಾಯ ಆಗಿದೆ ಅನ್ನೋದನ್ನ ಚೇಂಬರ್ ಎದುರು ಹೇಳಲಿ. ಕಾರಣವೇ ಇಲ್ಲದೆ ಹೀಗೆಲ್ಲ ಮಾಡುವ ಕಲಾವಿದರಿಗೆ ಕನ್ನಡ ಚಿತ್ರರಂಗದಲ್ಲಿ ಬೆಳೆಯಲು ಅವಕಾಶ ಕೊಡಬಾರದುʼ ಎಂದು ನಾಗಶೇಖರ್ ಕಿಡಿಕಾರಿದ್ದಾರೆ.
ʼಜನವರಿಯಿಂದ ಈಚೆಗೆ ರಚಿತಾ ರಾಮ್ ನನ್ನೊಂದಿಗೆ ಕಾಂಟಾಕ್ಟ್ ಇಲ್ಲ. ಒಂದು ಮೆಸೇಜ್-ಕಾಲ್ ಏನೂ ಇಲ್ಲ. ಅವರ ಮ್ಯಾನೇಜರ್‌ಗಳ ಜೊತೆ ಮಾತಾಡಿಕೊಂಡು ಕಮ್ಯೂನಿಕೇಟ್ ಮಾಡುತ್ತಿದ್ದೆವು. ಈಗೀಗ ಮ್ಯಾನೇಜರ್‌ಗಳೂ ಕೂಡ ರಚಿತಾ ರಾಮ್ ಬ್ಯುಸಿಯಿದ್ದಾರೆ ಎಂದು ಹೇಳುತ್ತಿದ್ದಾರೆ. ನಾನೂ 150 ಸಿನಿಮಾಗಳಲ್ಲಿ ನಟಿಸಿದ್ದೇನೆ. ವಿಷ್ಣುವರ್ಧನ್ ಸರ್ ಇದ್ದಾಗಿನಿಂದ ಸಿನಿರಂಗದಲ್ಲಿ ನಟಿಸುತ್ತ ಬಂದೆ. ಸಿನಿಮಾ ಪ್ರಮೋಷನ್‌ಗೆ ಬರಲು ಆಗದೆ ಇರೋಷ್ಟು ಬ್ಯುಸಿ ಯಾರೂ ಇರಲ್ಲʼ ಎಂದ ನಿರ್ದೇಶಕ ನಾಗಶೇಖರ್ ʼಶಿವರಾಜ್‌ಕುಮಾರ್, ಉಪೇಂದ್ರ ಮತ್ತು ಇತರ ದೊಡ್ಡ ಕಲಾವಿದರ ಹೆಸರು ಹೇಳಿ ರಚಿತಾ ರಾಮ್‌ಗೆ ಟಾಂಗ್ ಕೊಟ್ಟಿದ್ದಾರೆ.
ನಾಯಕಿಗೆ ಜವಾಬ್ದಾರಿ ಇಲ್ಲ
ಕನ್ನಡ ಸಿನಿಮಾ ಬೆಳೀಬೇಕು ಎಂದು ದೊಡ್ಡದೊಡ್ಡ ನಟರೆಲ್ಲ ಎಲ್ಲ ಸಿನಿಮಾಗಳಿಗೆ ಬೆಂಬಲ ಕೊಡುತ್ತಿದ್ದಾರೆ. ಆದರೆ ನಮ್ಮ ಚಿತ್ರದ ನಾಯಕಿಗೇ ಜವಾಬ್ದಾರಿ ಇಲ್ಲ. ನಾವು ಸಂಜು ವೆಡ್ಸ್ ಗೀತಾ 2 ಸಿನಿಮಾ ಪ್ರಮೋಷನ್‌ನ ಕಳೆದ 2 ತಿಂಗಳಿಂದ ಮಾಡ್ತಿದ್ದೇವೆ. ಈಗ ಸಕ್ಸಸ್ ಮೀಟ್ ಮಾಡಬೇಕು. ನಿಮಗೆ ಯಾವಾಗ ಆಗುತ್ತೋ..ಆಗ ಟೈಮ್ ಕೊಡಿ ಎಂದು ರಚಿತಾರನ್ನ ಕೇಳಿದ್ದೇವೆ. ಅದಕ್ಕೂ ಪ್ರತಿಕ್ರಿಯೆ ಇಲ್ಲ. ಇನ್ನು ಕಾಯುವ ತಾಳ್ಮೆ ನಮಗೆ ಇಲ್ಲ. ಪ್ರೇಕ್ಷಕರು, ಪತ್ರಕರ್ತರೆಲ್ಲ ರಚಿತಾ ಎಲ್ಲಿ ಕೇಳುತ್ತಿದ್ದಾರೆ. ನಮ್ಮ ಚಲನಚಿತ್ರ ವಾಣಿಜ್ಯ ಮಂಡಳಿಯು ರಚಿತಾ ರಾಮ್‌ರನ್ನ ಕರೆಸಿ ಬುದ್ಧಿ ಹೇಳ್ಬೇಕು. ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.