ರಘುಪತಿ ಭಟ್ 24 ಗಂಟೆಯೊಳಗೆ ನಿವೃತ್ತಿ ಘೋಷಿಸದಿದ್ದರೆ ಶಿಸ್ತು ಕ್ರಮ: ಸುನಿಲ್ ಕುಮಾರ್ ಎಚ್ಚರಿಕೆ

Share with

ಉಡುಪಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿರುವ ರಘುಪತಿ ಭಟ್ ಅವರು 24 ಗಂಟೆಯೊಳಗೆ ನಿವೃತ್ತಿ ಘೋಷಿಸಬೇಕು. ಇಲ್ಲದಿದ್ದರೆ ಪಕ್ಷದ ನಿಯಮ ಉಲ್ಲಂಘಿಸಿದ ಆಧಾರದ ಮೇಲೆ ಶಿಸ್ತು ಕ್ರಮ ಜರುಗಿಸುವುದು ಅನಿವಾರ್ಯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಹೇಳಿದರು.
ಉಡುಪಿ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 24 ಗಂಟೆಯೊಳಗೆ ಸ್ಪರ್ಧೆಗೆ ನಿವೃತ್ತಿ ಘೋಷಿಸದಿದ್ದರೆ, ಪಕ್ಷ ವಿರೋಧಿ ಚಟುವಟಿಕೆ ಅಥವಾ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಯಾರೇ ಇದ್ದರು ಕೂಡ ಅವರ ಮೇಲೆ ಪಕ್ಷ ಕಂಡಿತವಾಗಿಯೂ ಕ್ರಮಕೈಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.
ಪಕ್ಷದಲ್ಲಿ ಒಬ್ಬರ ಬಗ್ಗೆ ಒಂದು ಕ್ರಮ, ಮತ್ತೊಬ್ಬರ ಬಗ್ಗೆ ಇನ್ನೊಂದು ಕ್ರಮ ಅಂತಾ ಅಲ್ಲ. ಇವತ್ತು ಅಥವಾ ನಾಳೆ ರಘುಪತಿ ಭಟ್ ಸ್ಪರ್ಧೆಗೆ ನಿವೃತ್ತಿ ಘೋಷಿಸಬಹುದು ಎಂಬ ವಿಶ್ವಾಸವಿದೆ. ಈ ಬಗ್ಗೆ ಮಾತುಕತೆಯೂ ಮುಂದುವರಿದಿದೆ. ನಿವೃತ್ತಿ ಘೋಷಿಸದಿದ್ದರೆ, ರಘುಪತಿ ಭಟ್ ಅಂತಾ ಅಲ್ಲ. ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಯಾರೇ ಸ್ಪರ್ಧೆ ಮಾಡಿದರೂ ಅವರ ಮೇಲೆ ಕ್ರಮ ಕೈಗೊಳ್ಳುವುದು ಅನಿವಾರ್ಯ. ಅದು ಅಗತ್ಯವೂ ಕೂಡ. ಪಕ್ಷ ಕ್ರಮ ತೆಗೆದುಕೊಂಡೇ ತೆಗೆದುಕೊಳ್ಳುತ್ತದೆ ಎಂದರು.
ಈ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ, ನಮ್ಮ ಅಭ್ಯರ್ಥಿಯ ಗೆಲುವಿಗೆ ಏನೆಲ್ಲ ಪರಿಶ್ರಮ ಹಾಕಬೇಕೋ ಅದೆಲ್ಲವನ್ನು ನಾವು ಹಾಕ್ತೇವೆ. ನೈರುತ್ಯ ಪದವೀಧರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳ ಗೆಲುವಿಗೆ ದೊಡ್ಡ ಪ್ರಮಾಣದ ಪ್ರಯತ್ನ ಪ್ರಾರಂಭ ಮಾಡಿದ್ದೇವೆ. ತಳಮಟ್ಟದ ಕಾರ್ಯಕರ್ತರನ್ನು ಸಕ್ರಿಯಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದರು.


Share with

Leave a Reply

Your email address will not be published. Required fields are marked *