ಉಡುಪಿ: ಸಾರ್ವಜನಿಕರು ಕೋವಿಡ್ ಸೋಂಕಿನ ಬಗ್ಗೆ ಭಯ ಬೀಳದೆ ಅಗತ್ಯ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಂಡಲ್ಲಿ ಇವುಗಳಿಂದ ದೂರವಿರಲು ಸಾಧ್ಯ. ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಆರೋಗ್ಯ ಇಲಾಖೆಯ ವಿವಿಧ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದಾದ್ಯಂತ ಕೋವಿಡ್ ಸೋಂಕಿನ ಪ್ರಕರಣಗಳು ಕಂಡುಬರುತ್ತಿವೆ. ಜಿಲ್ಲೆಯಲ್ಲಿಯೂ ಕೆಲವು ಪ್ರಕರಣಗಳಿವೆ. ಸಾರ್ವಜನಿಕರು ಸರಕಾರ ಸೂಚಿಸಿರುವ ಸುರಕ್ಷಾ ಕ್ರಮಗಳನ್ನು ಪಾಲಿಸಬೇಕು. ವಯೋವೃದ್ಧರು, ಮಕ್ಕಳು, ಗರ್ಭಿಣಿಯರು ಕೋವಿಡ್ ಸೋಂಕಿನ ಬಗ್ಗೆ ಅಗತ್ಯವಿರುವ ಮುನ್ನೆಚ್ಚರಿಕ ಕ್ರಮಗಳನ್ನು ವಹಿಸಬೇಕು. ಜ್ವರ, ಕೆಮ್ಮು, ನೆಗಡಿ, ಶೀತ, ಉಸಿರಾಟ ತೊಂದರೆ ಮುಂತಾದ ಲಕ್ಷಣಗಳು ಕಂಡುಬಂದಲ್ಲಿ ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕು ಇದ್ದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವುದರ ಜತೆಗೆ ಇತರರಿಗೆ ಹರಡದಂತೆ ನೋಡಿಕೊಳ್ಳಬೇಕು ಎಂದರು.
ಎಚ್ಚರ ವಹಿಸಲು ಸೂಚನೆ ಪೂರ್ವ ಮುಂಗಾರು ಮಳೆ ವ್ಯಾಪಕವಾಗಿದ್ದು, ಮುಂಗಾರು ಮಳೆ ಈಗಾಗಲೇ ಜಿಲ್ಲೆಯಲ್ಲಿ ಪ್ರಾರಂಭಗೊಂಡಿದೆ. ಮಳೆಯ ನೀರು ಎಲ್ಲೆಂದರಲ್ಲಿ ಶೇಖರಣೆಗೊಂಡಲ್ಲಿ ಸೊಳ್ಳೆಗಳ ಸಂತಾನೋತ್ಪತಿ ವೃದ್ಧಿಗೊಂಡು ಡೆಂಗ್ಯೂ, ಮಲೇರಿಯಾ, ಚಿಕನ್‌ಗುನ್ಯಾ ಸೇರಿದಂತೆ ಮತ್ತಿತರ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಸಾರ್ವಜನಿಕರಿಗೆ ಇವುಗಳನ್ನು ತಡೆಗಟ್ಟುವ ಕುರಿತು ಆರೋಗ್ಯ ಶಿಕ್ಷಣದ ಬಗ್ಗೆ ಅರಿವು ಮೂಡಿಸಿ, ರೋಗಗಳು ಹರಡದಂತೆ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾ. ಪಂ.ಗಳು ಕಾರ್ಯಪ್ರವೃತ್ತರಾಗಬೇಕು ಎಂದರು.
ಶುಕ್ರವಾರ ಡ್ರೈ ಡೇ ಸಾಮಾನ್ಯವಾಗಿ ಮಳೆಯ ನೀರು ಕಟ್ಟಡದ ಮೇಲ್ಪಾವಣಿಗಳ ಮೇಲೆ, ಅನುಪಯುಕ್ತ ವಸ್ತುಗಳಲ್ಲಿ, ಟೈರುಗಳಲ್ಲಿ, ಎಳನೀರಿನ ಚಿಪ್ಪು ಸೇರಿದಂತೆ ಮತ್ತಿತರ ಸ್ಥಳಗಳಲ್ಲಿ ಶೇಖರಣೆಗೊಂಡು ಆ ಸ್ಥಳಗಳಲ್ಲಿ ಲಾರ್ವಾಗಳು ಉತ್ಪತ್ತಿಯಾಗುತ್ತವೆ. ಸೊಳ್ಳೆಗಳ ತಾಣಗಳ ನಿರ್ಮೂಲನೆಗೆ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಮುಂದಾಗಬೇಕು. ವಾರದ ಶುಕ್ರವಾರ ಡ್ರೈ ಡೇ ಯನ್ನಾಗಿಸಬೇಕು. ಹೊಟೇಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವತ್ಪತೆಗೆ ಆದ್ಯತೆ ನೀಡಬೇಕು. ಇವುಗಳನ್ನು ಉಲ್ಲಂ ಸಿದ್ದಲ್ಲಿ ಸ್ಥಳೀಯ ಸಂಸ್ಥೆಗಳು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ನೀರು ಪರೀಕ್ಷೆ ಮಾಡಿ ನೀರಿನ ಮೂಲಗಳು ಕುಡಿಯಲು ಯೋಗ್ಯವಾಗಿರುವ ಬಗ್ಗೆ ನೀರಿನ ಗುಣಮಟ್ಟ ಪರೀಕ್ಷೆಯನ್ನು 2025ನೇ ಸಾಲಿನಲ್ಲಿ ಕೈಗೊಳ್ಳಲಾಗಿದ್ದು, 7,650ರ ಪೈಕಿ 983 ಕಡೆ ನೀರು ಕಲುಷಿತಗೊಂಡಿದೆ. ಅವುಗಳಲ್ಲಿ 908 ತೆರೆದ ಬಾವಿಗಳನ್ನು ಕ್ಲೋರಿನೇಷನ್ ಮಾಡಲಾಗಿದೆ. ಕ್ಲೋರಿನೇಷನ್ ಕೈಗೊಳ್ಳದಿರುವ ಬಾವಿಗಳ ನೀರನ್ನು ಸೋಸಿ, ನೀರನ್ನು ಕುದಿಸಿ ಬಳಕೆ ಮಾಡಲು ಸೂಚಿಸಲಾಗಿದೆ. ಮಳೆಯ ಆರಂಭದ ದಿನಗಳಲ್ಲಿ ಬಾವಿಯ ನೀರುಗಳು ಕಲುಷಿತಗೊಳ್ಳುವ ಸಾಧ್ಯತೆಗಳು ಇರುತ್ತವೆ. ನೀರಿನ ಪರೀಕ್ಷೆಗಳನ್ನು ಆಗಿಂದಾಗ್ಗೆ ಕೈಗೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ | ಬಸವರಾಜ್ ಹುಬ್ಬಳ್ಳಿ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ| ಜ್ಯೋತ್ಸಾ$° ಬಿ.ಕೆ., ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮರಾವ್, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ| ಲತಾ ನಾಯಕ್, ಡಿ.ಎಸ್.ಒ. ಡಾ| ನಾಗರತ್ನಾ, ಜಿಲ್ಲಾ ಏಡ್ಸ್ ರೋಗ ನಿಯಂತ್ರಣಾಧಿಕಾರಿ ಡಾ| ಚಿದಾನಂದ ಸಂಜು, ಜಿಲ್ಲಾ ಸರ್ಜನ್ ಡಾ| ಎಚ್.ಅಶೋಕ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಪ್ರಶಾಂತ್ ಭಟ್, ಕೆ.ಎಂ.ಸಿ. ತಜ್ಞ ವೈದ್ಯರು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.