ಮಂಗಳೂರು: ಮಂಗಳೂರಿನ ಮೀನುಗಾರಿಕಾ ಬಂದರಿನ ದಕ್ಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಸುಡು ಬಿಸಿಲಿನಲ್ಲೇ ರೌಂಡ್ಸ್ ಹಾಕಿ ಮೀನುಗಾರರ ಸಮಸ್ಯೆಯನ್ನು ಆಲಿಸಿದ್ದಾರೆ.
ಸಚಿವರು ಮೀನುಗಾರಿಕಾ ಬಂದರಿನಲ್ಲಿ ಒಂದು ಗಂಟೆ ಕಾಲ ಸುತ್ತಾಡಿ ಮೀನುಗಾರ ಮುಖಂಡರು, ಬೋಟ್ ಮಾಲೀಕರು ಹಾಗೂ ಬಂದರು ಸಿಬ್ಬಂದಿ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹಾಗೂ ಇತರ ಇಲಾಖೆಯ ಅಧಿಕಾರಿಗಳು, ಕಾಂಗ್ರೆಸ್ ನಾಯಕರು ಜೊತೆಗಿದ್ದರು. ಮೀನುಗಾರಿಕಾ ಬಂದರಿನ ಅವ್ಯವಸ್ಥೆಗಳ ಬಗ್ಗೆ ಮೀನುಗಾರರು ಸಚಿವರ ಗಮನಕ್ಕೆ ತಂದರು.
ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು ಮೀನುಗಾರರು ಮತ್ತು ಇಲ್ಲಿನ ಮುಖಂಡರು ಸಮಸ್ಯೆ ಹೇಳಿಕೊಂಡಿದ್ದಾರೆ. ಇಲ್ಲಿನ ಮುಖ್ಯ ಸಮಸ್ಯೆ ಬಗ್ಗೆ ಅವಲೋಕನ ಮಾಡಿದ್ದೇನೆ, ಮುಂದೆ ಸಭೆ ನಡೆಸಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ, ಇಲ್ಲಿ ಸೆಕ್ಯೂರಿಟಿ ವ್ಯವಸ್ಥೆ ಇಲ್ಲದಿರುವುದು ಬಹಳ ಚಿಂತಾಜನಕ ವಿಷಯ, ಈ ಬಗ್ಗೆ ಖಂಡಿತವಾಗಿಯೂ ಗಮನ ಹರಿಸುತ್ತೇನೆ. ಬಹಳಷ್ಟು ಸಮಸ್ಯೆಗಳಿವೆ, ಈ ಬಗ್ಗೆ ಸಭೆ ನಡೆಸಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಬಂದರು ದಕ್ಕೆಯಲ್ಲಿ ಸುತ್ತಾಟದ ವೇಳೆ ಮೀನು ಹರಾಜು ಜಾಗಕ್ಕೆ ತೆರಳಿದ ಸಚಿವ ದಿನೇಶ್ ಗುಂಡೂರಾವ್ ಅವರು ಸ್ವತಃ ಅಂಜಲ್ ಮೀನನ್ನು ಕೈಯ್ಯಲ್ಲಿ ಹಿಡಿದು ಹರಾಜು ಕೂಗಿದರು. ಸಚಿವರಾದ ಬಳಿಕ ಪ್ರಥಮ ಬಾರಿಗೆ ಮಂಗಳೂರಿನ ಬಂದರು ದಕ್ಕೆಗೆ ಭೇಟಿ ನೀಡಿ ಹರಾಜು ಏರಿಯಾದಲ್ಲಿ ಸುತ್ತಾಟ ನಡೆಸಿ, ಮೀನುಗಾರರ ಜೊತೆ ಬೆರೆತು ಅವರ ಸಮಸ್ಯೆಗಳನ್ನು ಆಲಿಸಿದ ಸಚಿವರ ಬಗ್ಗೆ ಮೀನುಗಾರರು ಖುಷಿ ಪಟ್ಟಿದ್ದಾರೆ.