
ಪ್ರತಿಯೊಬ್ಬರ ಜೀವನದಲ್ಲೂ ಟೈಮ್ ಅನ್ನೋದು ಬಹಳ ಮುಖ್ಯವಾದ ಪಾತ್ರವಹಿಸುತ್ತದೆ. ಎಲ್ಲರಿಗೂ ಇರೋದು ಒಂದೇ ಟೈಮ್. ಆದರೆ ಅದು ಒಬ್ಬೊಬ್ಬರ ಬದುಕಲ್ಲಿ ಒಂದು ಒಂದು ರೀತಿಯಲ್ಲಿ ಅಥವಾ ಬೇಡದ ಗಳಿಗೆಯಲ್ಲಿ ಬರುತ್ತದೆ. ಆದ್ದರಿಂದ ಅದನ್ನು ಬ್ಯಾಡ್ ಟೈಮ್ ಎಂದು ಹೇಳಲಾಗುತ್ತೆ. ಖುಷಿಯ ಸಂದರ್ಭದಲ್ಲಿ ಅದನ್ನು ಗುಡ್ ಟೈಮ್ ಎಂದು ಕರೆಯಲಾಗುತ್ತೆ.

ಇನ್ನು ಈ ಟೈಮ್ ಅನ್ನು ತೋರಿಸುವ ಗೋಡೆ ಗಡಿಯಾರ ಮನೆಯಲ್ಲಿ ಇರಬೇಕು. ಆದರೆ ಅದು ಅದರದ್ದೇ ಆದ ಜಾಗದಲ್ಲಿ ಮತ್ತು ದಿಕ್ಕಿನಲ್ಲಿ ಇಡಬೇಕು ಎನ್ನುವುದು ನಿಮಗೆ ಗೊತ್ತಾ? ನಿಮ್ಮ ಮನಸ್ಸಿಗೆ ಬಂದ ಹಾಗೆ ನಿಮಗೆ ಇಷ್ಟವಾದ ಜಾಗದಲ್ಲಿ ಗಡಿಯಾರವನ್ನು ಇಡಬಾರದು. ಇದರ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.
ಕೆಲವರಿಗೆ ಈಗಲೂ ಗೊಂದಲವಿದೆ. ಮನೆಯಲ್ಲಿ ಗಡಿಯಾರವನ್ನು ತೂಗಾಕಬೇಕಾ? ಅದನ್ನು ಎಲ್ಲಿ ಮತ್ತು ಯಾವ ದಿಕ್ಕಿಗೆ ಮುಖ ಮಾಡಿ ಇಡಬೇಕು ಎಂಬ ಸಂಶಯ ಹಲವರಿಗೆ ಇದೆ. ಹೆಚ್ಚಾಗಿ ಎಲ್ಲರೂ ಮನೆಯ ಹಾಲ್‌ನಲ್ಲಿ ಗಡಿಯಾರವನ್ನು ಇಡುತ್ತಾರೆ. ಅಕಸ್ಮಾತ್ ನೀವು ಗಡಿಯಾರವನ್ನು ತಪ್ಪು ದಿಕ್ಕಿನಲ್ಲಿ ಇಟ್ಟರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂದಿನ ಯುಗದಲ್ಲಿ ಕೈಗಡಿಯಾರಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ.
ಮನೆಗಳಲ್ಲಿ ಗಡಿಯಾರ ಇಟ್ಟರೆ ಸಮಸ್ಯೆ ಏನು ಇಲ್ಲ. ಆದರೆ ಸರಿಯಾದ ಜಾಗ ಮತ್ತು ದಿಕ್ಕಿನಲ್ಲಿ ಗಡಿಯಾರ ಇಡಲು ಮರೆಯಬೇಡಿ. ಗಡಿಯಾರ ಇಡಲು ಏನು ವಾಸ್ತು ಎಂದು ನಿಮ್ಮ ತಲೆಯಲ್ಲಿ ಓಡುತ್ತಿರಬಹದು. ಆದರೆ ನೀವು ಸ್ವಲ್ಪ ಯಾಮಾರಿದರೂ ನಿಮ್ಮ ಟೈಮ್ ದಾರಿ ತಪ್ಪುತ್ತದೆ. ಈ ಸಂಬಂಧ ವಾಸ್ತು ಶಾಸ್ತ್ರದಲ್ಲಿ ಗಡಿಯಾರದ ಬಗ್ಗೆ ಬಹಳಷ್ಟು ಹೇಳಲಾಗಿದೆ.
ನೆನಪಿನಲ್ಲಿರಲಿ ನಿಮ್ಮ ಮನೆಯ ಗೋಡೆ ಗಡಿಯಾರವನ್ನು ಬಾಗಿಲಿನ ಮೇಲೆ ತೂಗಾಕಲೇ ಬೇಡಿ. ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ಹರಡುತ್ತದೆ. ಗಡಿಯಾರಗಳನ್ನು ಮುಖ್ಯ ದ್ವಾರದ ಕೆಳಗೆ ಅಥವಾ ಮಲಗುವ ಕೋಣೆಯ ಬಾಗಿಲುಗಳ ಮೇಲೆ ಇಡಬಾರದು. ಈ ರೀತಿ ಇಡುವುದರಿಂದ ಮನೆಯಲ್ಲಿ ಅಶಾಂತಿ ಕಾಡುತ್ತದೆ ಹಾಗೂ ಮನೆ ಸದಸ್ಯರ ನಡುವೆ ಜಗಳವಾಗುವ ಸಂಭವವಿದೆ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.
ಇನ್ನು ತಮ್ಮ ಮನೆಗಳಲ್ಲಿ ಗೋಡೆ ಗಡಿಯಾರವನ್ನು ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲಿ ಇರಿಸಿ. ಈ ರೀತಿಯಲ್ಲಿ ಗಡಿಯಾರವನ್ನು ಇರಿಸಿದರೆ ಇದು ಧನಾತ್ಮಕತೆಯನ್ನು ಹೆಚ್ಚಿಸುತ್ತದೆ. ನಿಮ್ಮ ಕೆಲಸಗಳು ಸರಿಯಾಗಿ ನಡೆಯುತ್ತದೆ. ಯಾವುದೇ ವಿಘ್ನಗಳು ಬರಲ್ಲ. ಪೂರ್ವ, ಪಶ್ಚಿಮ, ಉತ್ತರ ದಿಕ್ಕುಗಳಲ್ಲಿ ನೋಡಿದರೆ ಧನಾತ್ಮಕ ಶಕ್ತಿ ಬರುವುದು ಮಾತ್ರವಲ್ಲದೆ ಕೆಲಸವೂ ಚೆನ್ನಾಗಿ ನಡೆಯುತ್ತದೆ.
ಈ ದಿಕ್ಕಿನಲ್ಲಿ ಗಡಿಯಾರವನ್ನು ಇಡಲೇ ಬಾರದು. ಮನೆಯಲ್ಲಿ ಆಗಲಿ ಅಥವಾ ನೀವು ಕೆಲಸ ಮಾಡುವ ಕಚೇರಿಯಲ್ಲಾಗಲಿ ಗಡಿಯಾರವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಇದು ಮನೆ ಅಥವಾ ಕಚೇರಿಯಲ್ಲಿ ನಕಾರಾತ್ಮಕ ಶಕ್ತಿಯನ್ನು ತರುತ್ತದೆ. ಇದಲ್ಲದೆ, ಈ ರೀತಿ ಮಾಡಿದರೆ ನಿಮ್ಮ ಆರ್ಥಿಕ ನಷ್ಟದ ಸಾಧ್ಯತೆಗಳಿವೆ ಎಂದು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ.
ಹಾಗೆಯೇ ನಿಮ್ಮ ಮನೆಯಲ್ಲಿ ಎಂದಿಗೂ ಚಲಿಸದ ಗಡಿಯಾರವನ್ನು ಇಡಲೇಬೇಡಿ. ವಾಸ್ತು ಶಾಸ್ತ್ರದ ಪ್ರಕಾರ ಹಾಳಾದ ಅಥವಾ ನಿಲ್ಲಿಸಿದ ಗಡಿಯಾರಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇನ್ನು ಅದೇ ರೀತಿ ಕೆಲವರು ಸಮಯವನ್ನು 10 ನಿಮಿಷ ಮುಂದಕ್ಕೆ ಅಥವಾ ಹಿಂದಕ್ಕೆ ಹಾಕುತ್ತಾರೆ. ಹಾಗೆ ಮಾಡುವುದು ಸಹ ಒಳ್ಳೆಯದಲ್ಲ. ಮುಖ್ಯವಾದ ವಿಚಾರವೆಂದರೆ ಮನೆಯಲ್ಲಿ ಯಾವಾಗಲೂ ದುಂಡಗಿನ ಅಥವಾ ಚದರ ಗಡಿಯಾರವನ್ನು ಅಳವಡಿಸಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.




