ಸಿನಿಮಾಗಳಲ್ಲಿ ಕಲಾವಿದರು ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚುತ್ತಾರೆ. ಬೇರೆ ಬೇರೆ ಸಿನಿಮಾಗಳಲ್ಲಿ ಭಿನ್ನ ಪಾತ್ರಗಳನ್ನು ಮಾಡುತ್ತಾರೆ. ಒಬ್ಬ ನಟ ದೊಡ್ಡ ಪರದೆಯಲ್ಲಿ ಬಣ್ಣ ಹಚ್ಚಿ ಮನರಂಜನೆ ನೀಡುತ್ತಾನೆ. ಆದರೆ ಅದರ ಹಿಂದಿನ ಶ್ರಮ ಪ್ರೇಕ್ಷಕರಿಗೆ ಕಾಣುವುದಿಲ್ಲ.

ಕೆಲ ಪಾತ್ರಗಳು ಹೆಚ್ಚಿನ ಶ್ರಮವನ್ನು ಬೇಡುತ್ತದೆ. ಒಂದೇ ಸಿನಿಮಾದಲ್ಲಿ ಕಲಾವಿದ ಒಂದು ಅಥವಾ ಎರಡು ಪಾತ್ರಗಳನ್ನು ಮಾಡಬಹುದು. ಆದರೆ ಒಂದೇ ಸಿನಿಮಾದಲ್ಲಿ ಹತ್ತಾರು ಪಾತ್ರಗಳನ್ನು ಮಾಡಿದ್ದನ್ನು ಎಂದಾದರೂ ನೋಡಿದ್ದೀರಾ? ಈ ನಟ ಒಂದೇ ಸಿನಿಮಾದಲ್ಲಿ 45 ಪಾತ್ರಗಳನ್ನು ಮಾಡಿ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ.
ಸೌತ್ ಸಿನಿಮಾರಂಗ ತನ್ನ ವಿಭಿನ್ನ ಕಥೆ ಹಾಗೂ ಸಿನಿಮಾಗಳಿಗೆ ಹೆಸರುವಾಸಿ. ಒಂದು ಸಣ್ಣ ಎಳೆಯನ್ನಿಟ್ಟುಕೊಂಡು ಇಡೀ ಸಿನಿಮಾವನ್ನು ಕಟ್ಟಿಕೊಟ್ಟ ಉದಾಹರಣೆ ಸೌತ್ ಚಿತ್ರರಂಗದಲ್ಲಿದೆ.

ರಜಿನಿಕಾಂತ್, ಕಮಲ್ ಹಾಸನ್ ಅವರಂತಹ ಹಿರಿಯ ನಟರು ತನ್ನ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಿ ಮಿಂಚಿದ್ದಾರೆ. ಕಮಲ್ ಹಾಸನ್ 2008ರಲ್ಲಿ ಬಂದಿದ್ದ ‘ದಶಾವತಾರಂ’ ಸಿನಿಮಾದಲ್ಲಿ 10 ಪಾತ್ರಗಳನ್ನು ಮಾಡಿದ್ದು, ಆ ಕಾಲದಲ್ಲಿ ದೊಡ್ಡ ಸುದ್ದಿಯಾಗಿತ್ತು.
ಕಮಲ್ ಹಾಸನ್, ರಜಿನಿಕಾಂತ್, ವಿಕ್ರಮ್ನಂತಹ ನಟರು ಒಂದೇ ಸಿನಿಮಾದಲ್ಲಿ ಡಬಲ್ – ತ್ರಿಬಲ್ ರೋಲ್ ಮಾಡಿದ ಅನೇಕ ಉದಾಹರಣೆಗಳಿವೆ. 2018ರಲ್ಲಿ ಬಂದ ಮಾಲಿವುಡ್ ಸಿನಿಮಾವೊಂದರಲ್ಲಿ ನಟರೊಬ್ಬರು 45 ಪಾತ್ರಗಳನ್ನು ಮಾಡಿದ್ದರು.!
ಹೌದು. 2018ರಲ್ಲಿ ಮಾಲಿವುಡ್ನಲ್ಲಿ ‘ಆರನು ನಿಜಾನ್’ ಎನ್ನುವ ಸಿನಿಮಾ ಬಂದಿತ್ತು. ಪಿ.ಆರ್. ಉನ್ನಿಕೃಷ್ಣನ್ ಈ ಚಿತ್ರವನ್ನು ಡೈರೆಕ್ಟ್ ಮಾಡಿದ್ದರು. ಬಾಕ್ಸಾಫೀಸ್ನಲ್ಲಿ ಚಿತ್ರ ಅಂದುಕೊಂಡ ಮಟ್ಟಗಿನ ಯಶಸ್ಸು ಕಂಡಿಲ್ಲ. ಆದರೆ ಈ ಚಿತ್ರ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಬರೆದಿತ್ತು. ಅದಕ್ಕೆ ಕಾರಣ ನಟ ಜಾನ್ಸನ್ ಜಾರ್ಜ್.

ಜಾನ್ಸನ್ ಜಾರ್ಜ್ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 1 ಗಂಟೆ 47 ನಿಮಿಷದ ಈ ಚಿತ್ರದಲ್ಲಿ ಜಾನ್ಸನ್ ಜಾರ್ಜ್ ಐತಿಹಾಸಿಕ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು. ಒಂದಲ್ಲ ಎರಡಲ್ಲ ಬರೋಬ್ಬರಿ 45 ಪಾತ್ರಗಳನ್ನು ಈ ಚಿತ್ರದಲ್ಲಿ ಜಾನ್ಸನ್ ಜಾರ್ಜ್ ನಿಭಾಯಿಸಿದ್ದರು.!
ಮಹಾತ್ಮ ಗಾಂಧಿ, ಯೇಸುಕ್ರಿಸ್ತ, ಸ್ವಾಮಿ ವಿವೇಕಾನಂದ, ಅಬ್ದುಲ್ ಕಲಾಂ ಮತ್ತು ಲಿಯೊನಾರ್ಡೊ ಡಾ ವಿಂಚಿಯಂತಹ 45 ಐತಿಹಾಸಿಕ ಮತ್ತು ಪ್ರಭಾವಶಾಲಿ ವ್ಯಕ್ತಿಗಳ ಪಾತ್ರಗಳಿಗೆ ಜಾರ್ಜ್ ಬಣ್ಣ ಹಚ್ಚಿದ್ದರು.
ಆ ಮೂಲಕ ಚಿತ್ರರಂಗದಲ್ಲಿ ಯಾರೂ ಮಾಡದ ದಾಖಲೆಯನ್ನು ಜಾರ್ಜ್ ಮಾಡಿದ್ದರು. ಅವರ ಈ ಪ್ರಯೋಗ ಗಿನ್ನೆಸ್ ವರ್ಲ್ಡ್ ರೆಕಾರ್ಡ್ನಲ್ಲಿ ದಾಖಲಾಗಿತ್ತು.
ಈ ಚಿತ್ರದ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಚಿತ್ರದ ಭಾವನೆಗಳು ಮತ್ತು ಸಂದೇಶವನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿತ್ತು.
‘ಗ್ಲೋಬ್ ಮ್ಯಾನ್’ ಎಂದು ಕರೆಯಲ್ಪಡುವ ವ್ಯಕ್ತಿಯ ಸುತ್ತ ಚಿತ್ರ ಕಥೆ ಸಾಗುತ್ತದೆ. ಈ ಪಾತ್ರವು ಪ್ರಪಂಚದಾದ್ಯಂತ ಪ್ರಯಾಣಿಸುತ್ತದೆ ವ್ಯಕ್ತಿಯ ಗುರುತು ಮತ್ತು ಜೀವನದ ಉದ್ದೇಶದ ಸುತ್ತ ಕಥೆ ಕೇಂದ್ರಿತವಾಗಿದೆ.
ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ನಿಂತು ಇದ್ದಕ್ಕಿದ್ದಂತೆ ತಾನು ಗಾಂಧಿಯಾಗಿದ್ದೇನೆ ಎಂದು ಅರಿತುಕೊಳ್ಳುತ್ತಾನೆ. ಇದೇ ರೀತಿ ವಿವಿಧ ಐತಿಹಾಸಿಕ ಮತ್ತು ಸಾಂಸ್ಕೃತಿಕ ವ್ಯಕ್ತಿಗಳಾಗುವ ಕಥೆಯನ್ನು ಚಿತ್ರ ಒಳಗೊಂಡಿದೆ.
ಪ್ರತಿಯೊಂದು ಪಾತ್ರವೂ ‘ನಾನು ಯಾರು?’ ಮತ್ತು ‘ನನ್ನ ನಿಜವಾದ ಗುರುತು ಏನು?’ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.
ಜಾರ್ಜ್ ಮಾತ್ರವಲ್ಲದೆ ಈ ಸಿನಿಮಾದಲ್ಲಿ ಜಯಚಂದ್ರನ್ ತಗ್ನಿಕರನ್ ಮತ್ತು ಮುಹಮ್ಮದ್ ನೀಲಂಬೂರ್ ಅವರಂತಹ ಖ್ಯಾತ ನಟರೂ ಕೂಡ ಬಣ್ಣ ಹಚ್ಚಿದ್ದರು.




