ಡಾಲಿ ಧನಂಜಯ್ (Daali Dhananjay) ಕನ್ನಡ ಚಿತ್ರರಂಗದ ಜನಪ್ರಿಯ ನಟ ಮತ್ತು ನಿರ್ಮಾಪಕ. ತಮ್ಮ ನಟನೆ ಮಾತ್ರವಲ್ಲದೆ ನಿರ್ಮಾಣದಿಂದಲೂ ಅದ್ಭುತ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡುತ್ತಾ ಬರುತ್ತಿದ್ದಾರೆ. ಡಾಲಿ ಧನಂಜಯ್ ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ವೈದ್ಯೆ ಧನ್ಯತಾ ಅವರೊಟ್ಟಿಗೆ ಅದ್ದೂರಿಯಾಗಿ ವಿವಾಹವಾದರು. ಇದೀಗ ಡಾಲಿ ಧನಂಜಯ್ ಮತ್ತು ಧನ್ಯತಾ ಪೋಷಕರಾಗುತ್ತಿದ್ದು, ಖುಷಿಯ ವಿಷಯವನ್ನು ಡಾಲಿ ಧನಂಜಯ್ ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೆ ಡಾಲಿ ಧನಂಜಯ್ ಅವರು ಮಾಧ್ಯಮವೊಂದರ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಡಾಲಿ ಅವರು ತಮ್ಮ ಕುಟುಂಬಕ್ಕೆ ಇನ್ನೊಂದು ಜೀವ ಸೇರ್ಪಡೆ ಆಗುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ತಾವು ತಂದೆ ಆಗುತ್ತಿರುವುದಾಗಿ ಡಾಲಿ ಧನಂಜಯ್ ಹೇಳಿದ್ದಾರೆ. ಡಾಲಿ ಧನಂಜಯ್ ಪತ್ನಿ ಧನ್ಯತಾ ಅವರು ವೈದ್ಯೆಯಾಗಿದ್ದು, ಫೆಬ್ರವರಿ 16 ರಂದು ಡಾಲಿ ಧನಂಜಯ್ ಮತ್ತು ಧನ್ಯತಾ ಅವರು ಮೈಸೂರಿನಲ್ಲಿ ಬಲು ಅದ್ಧೂರಿಯಾಗಿ ವಿವಾಹವಾಗಿದ್ದರು. ಇದೀಗ ಈ ಜೋಡಿ ಮತ್ತೊಂದು ಜೀವವನ್ನು ಸ್ವಾಗತಿಸುತ್ತಿದೆ.





